ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದ ಜಾನ್ ಎಡ್ರಿಚ್ ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಗಣ್ಯರು ಸಂತಾಪ ಸೂಚಿಸಿದ್ದಾರೆ.
1963 ಮತ್ತು 1976ರ ನಡುವಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 77 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳಲ್ಲಿ ಎಡ್ರಿಚ್ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದರು. ಅವರು ಟೆಸ್ಟ್‌ನಲ್ಲಿ 43.54 ಸರಾಸರಿಯಲ್ಲಿ 5,138 ರನ್ ಮತ್ತು ಏಕದಿನದಲ್ಲಿ ಸರಾಸರಿ 37.16ರಂತೆ 223 ರನ್ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ಶತಕಗಳು ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರು 1965ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನಲ್ಲಿ ವೃತ್ತಿಜೀವನದಲ್ಲಿ ಅತಿ ಹೆಚ್ಚು ವೈಯಕ್ತಿಕ 301* ರನ್ ಗಳಿಸಿದ್ದರು. ತ್ರಿಶತಕ ಬಾರಿಸಿದ ಸಂದರ್ಭದಲ್ಲಿ 52 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ...ಕೆ ಎಲ್ ರಾಹುಲ್, ರಿಷಬ್ ಪಂತ್ ಅಪಾಯಕಾರಿ.. ಅಡಿಲೇಡ್‌ನಂತೆ ಸೋಲು ಮರುಕಳಿಸದು: ಆಸೀಸ್ ನಾಯಕ
1971ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. 1968ರ ಆ್ಯಶಸ್ ಸರಣಿಯಲ್ಲಿ ಅವರು 61.55 ಸರಾಸರಿಯಂತೆ 554 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ್ದ ದಾಖಲೆಗೆ ಪಾತ್ರರಾಗಿದ್ದರು. 1970/71ರ ಆ್ಯಶಸ್ ಸರಣಿಯಲ್ಲಿ 72ರ ಸರಾಸರಿಯಲ್ಲಿ 648 ರನ್ ಗಳಿಸಿದ್ದರು.
ಆಗ ಹೆಚ್ಚು ರನ್ ಬಾರಿಸಿದವರಲ್ಲಿ ಎರಡನೇ ಸ್ಥಾನ ಹೊಂದಿದ್ದರು. ಆಸೀಸ್ ಸರಣಿಗಳಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎಡ್ರಿಚ್ 5ನೇ (2,644 ರನ್) ಸ್ಥಾನದಲ್ಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ಶತಕ ಬಾರಿಸಿದ 25 ಆಟಗಾರರಲ್ಲಿ ಇವರೂ ಒಬ್ಬರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 39,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.