ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸೋಲು ಭಾರತೀಯ ಕ್ರೀಡಾಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಸಮತೋಲಿತ ತಂಡ ಮತ್ತು ಆಲ್ರೌಂಡರ್ಗಳ ಕೊರತೆಯಿಂದಾಗಿ ಈ ಫಲಿತಾಂಶ ಬಂದಿದೆ ಎಂಬ ವಿಶ್ಲೇಷಣೆ ಶುರುವಾಗಿದೆ. ಹಿರಿಯ ಆಟಗಾರರು ಕೂಡ ತಂಡದ ಆಯ್ಕೆ ಬಗ್ಗೆ ಚಕಾರ ಎತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ನಾಯಕನ ಬದಲಾವಣೆಗೆ ಸೂಚಿಸಿದ್ದಾರೆ. ನಾನು ಆಯ್ಕೆ ಮಂಡಳಿ ಮುಖ್ಯಸ್ಥನಾಗಿದ್ದರೆ, ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಮಾಡುವೆ ಎಂದಿದ್ದಾರೆ. ಈ ಬಗ್ಗೆ ಕ್ರಿಕೆಟ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿರುವ ಶ್ರೀಕಾಂತ್, ವಿಶ್ವಕಪ್ಗೆ 2 ವರ್ಷಗಳ ಹಿಂದಿನಿಂದಲೇ ತಯಾರಿ ನಡೆಸಬೇಕಾಗುತ್ತದೆ.
ತಂಡದಲ್ಲಿ ವೇಗದ ಬೌಲಿಂಗ್ ಮಾಡುವ ಆಲ್ರೌಂಡರ್ಗಳ ಕೊರತೆಯಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕರಾಗಿದ್ದಾರೆ. ಅವರನ್ನೇ ಭಾರತ ತಂಡದ ಕ್ಯಾಪ್ಟನ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ನಾನು ಮುಖ್ಯಸ್ಥನಾಗಿದ್ದರೆ ಹಾರ್ದಿಕ್ ನಾಯಕ ಮಾಡ್ತಿದ್ದೆ: ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ಹಾರ್ದಿಕ್ ಪಾಂಡ್ಯರನ್ನು 2024 ರ ವಿಶ್ವಕಪ್ನ ನಾಯಕನನ್ನಾಗಿ ನೇರವಾಗಿ ಘೋಷಣೆ ಮಾಡುತ್ತಿದ್ದೆ. ಇಂದಿನಿಂದಲೇ ತಂಡವನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ಶುರುವಾಗಲಿರುವ ನ್ಯೂಜಿಲ್ಯಾಂಡ್ ಸರಣಿಯಿಂದಲೇ ತಂಡದ ಬಲ ಪರೀಕ್ಷೆ ನಡೆಸಬೇಕು. ಮುಂದಿನ ವರ್ಷದ ವೇಳೆಗೆ ತಂಡದ ಗುಣಮಟ್ಟ ಸಾಬೀತಾಗಬೇಕು. ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಆಲ್ರೌಂಡರ್ಗಳೇ ನಿರ್ಣಾಯಕ: ಆಲ್ರೌಂಡರ್ ಮಹತ್ವವನ್ನು ಹೇಳಿದ ಶ್ರೀಕಾಂತ್, ಭಾರತ 1983, 2007, 2011 ರ ವಿಶ್ವಕಪ್ ಗೆಲ್ಲಲು ಕಾರಣವೇ ಆಲ್ರೌಂಡರ್ಗಳು. ತಂಡದಲ್ಲಿ ವೇಗದ ಬೌಲ್ ಮಾಡುವ ಆಲ್ರೌಂಡರ್ಗಳು ಅತ್ಯಗತ್ಯ. ದೀಪಕ್ ಹೂಡಾರಂತಹ ಹುಡುಗರನ್ನು ಬೆಳೆಸಬೇಕು. ತಂಡದಲ್ಲಿ ಇಂತವರ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
ಹಾರ್ದಿಕ್ ಪಾಂಡ್ಯರೇ ಮುಂದಿನ ಆಯ್ಕೆ: ಐಪಿಎಲ್ನಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ಅನ್ನು ಹಾರ್ದಿಕ್ ಪಾಂಡ್ಯ ಚಾಂಪಿಯನ್ ಮಾಡಿದರು. ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ 44.27 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 4 ಅರ್ಧ ಶತಕಗಳ ಸಮೇತ 487 ರನ್, 8 ವಿಕೆಟ್ಗಳನ್ನು ಪಡೆದರು.
ಭಾರತದ ಪರವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಪಾಂಡ್ಯ ಉಪನಾಯಕನಾಗಿ ಆಯ್ಕೆಯಾಗಿ ಗಮನ ಸೆಳೆದರು. ವೆಸ್ಟ್ ಇಂಡೀಸ್ ತಂಡದೆದುರೂ ನೇತೃತ್ವದ ಸಹಭಾಗಿತ್ವ ಹೊಂದಿದ್ದರು. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕನಾಗಿ 2-0 ಯಿಂದ ಸರಣಿ ಗೆದ್ದರು. ಇಷ್ಟೆಲ್ಲದರ ಮಧ್ಯೆ ಮುಂದಿನ ನ್ಯೂಜಿಲ್ಯಾಂಡ್ ಟಿ 20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ 18 ರಿಂದ ಸರಣಿ ಆರಂಭವಾಗಲಿದೆ.
ಓದಿ: ಟಿ20 ವಿಶ್ವಕಪ್ 11 ಬಳಗಕ್ಕೆ ಬಟ್ಲರ್ ನಾಯಕ: ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ