ಹೈದರಾಬಾದ್: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಕಳೆದುಕೊಂಡಿತು. ಯುವ ಆಟಗಾರರ ಟೀಂ ವಿಂಡೀಸ್ನಲ್ಲಿ ಯಶಸ್ಸು ಸಾಧಿಸುವಲ್ಲಿ ಎಡವಿತು. ಇನ್ನು, ಇದೇ 18ರಿಂದ ಮೂರು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಗಾಯದಿಂದ ಚೇತರಿಸಿಕೊಂಡು ನೇರವಾಗಿ ಕ್ಯಾಪ್ಟನ್ ಆಗಿ ತಂಡಕ್ಕೆ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಯುವ ಪಡೆ ಟಿ20 ಮೂರು ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ಇದೀಗ ನಾನಾ ಪ್ರಯೋಗಗಳಿಗೆ ಮುಂದಾಗಿದೆ. ಐಪಿಎಲ್ ಮತ್ತು ದೇಶೀ ಕ್ರಿಕೆಟ್ನಲ್ಲಿ ಮಿಂಚಿದ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.
ಅದೇ ರೀತಿ, ಐರ್ಲೆಂಡ್ನಲ್ಲಿ ನಡೆಯುವ ಟಿ20 ಪಂದ್ಯಗಳ ಸರಣಿಗೂ ಯುವಕರಿಗೆ ಮಣೆ ಹಾಕಲಾಗಿದೆ. ಸರಣಿಯಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಆಲ್ರೌಂಡರ್ ಶಹಬಾಜ್ ಅಹ್ಮದ್ ಮತ್ತು ಬ್ಯಾಟರ್ ರಿಂಕು ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬೌಲರ್ ಮುಖೇಶ್ ಕುಮಾರ್ ಮತ್ತು ಬ್ಯಾಟರ್ಗಳಾದ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್ ಡೆಬ್ಲ್ಯೂ ಮಾಡಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಕಮ್ಬ್ಯಾಕ್ಗೆ ಕಾಯುತ್ತಿದ್ದಾರೆ.
ವಿಂಡೀಸ್ ಪ್ರವಾಸದಲ್ಲಿ ಏಕದಿನ ಮತ್ತು ಟಿ20ಯಲ್ಲಿ ಸಂಜುಗೆ ಅವಕಾಶ ಸಿಕ್ಕರೂ ಹೆಚ್ಚು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಏಕದಿನ ಪಂದ್ಯವೊಂದರಲ್ಲಿ ಅರ್ಧಶತಕ ದಾಖಲಿಸಿದ್ದು ಬಿಟ್ಟರೆ ಮತ್ತಾವ ಪ್ರದರ್ಶನವೂ ಬೆಸ್ಟ್ ಎನ್ನುವಂತಿರಲಿಲ್ಲ. ಐರ್ಲೆಂಡ್ ಟೂರ್ನಲ್ಲಿ ಬುಮ್ರಾ ಇರುವ ಮೂರು ಮ್ಯಾಚ್ನಲ್ಲಿ ಜಿತೇಶ್ ಶರ್ಮಾಗೆ ಅವಕಾಶ ಸಿಗುತ್ತಾ ಅಥವಾ ಸಂಜು ಅವರನ್ನೇ ಮುಂದುವರೆಸುತ್ತಾರಾ ಕಾದು ನೋಡಬೇಕಿದೆ.
ಈವರೆಗೆ 9 ಟಿ20 ಪಂದ್ಯ ಆಡಿರುವ ರುತುರಾಜ್ ಗಾಯಕ್ವಾಡ್ ಕಳೆದ ವರ್ಷ ಐರ್ಲೆಂಡ್ ವಿರುದ್ಧವೇ ಕೊನೆಯ ಪಂದ್ಯ ಆಡಿದ್ದರು. ಆ ಬಳಿಕ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ. 13 ಪಂದ್ಯಗಳನ್ನು ಆಡಿರುವ ದುಬೆ 2020ರಲ್ಲಿ ಕೊನೆಯ ಟಿ20 ಆಡಿದ್ದರು. 15 ಪಂದ್ಯವಾಡಿರುವ ಅವೇಶ್ 2022ರಲ್ಲಿ ತಮ್ಮ ಕೊನೆಯ ಟಿ20 ಆಡಿದ್ದಾರೆ. ನಾಯಕ ಬುಮ್ರಾ ಗಾಯದಿಂದ 2022 ಸಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ ಕೃಷ್ಣ, ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
ಇದನ್ನೂ ಓದಿ: Prithvi Shaw: ಇಂಗ್ಲೆಂಡ್ನಲ್ಲಿ ಮತ್ತೊಂದು ಶತಕ ದಾಖಲಿಸಿದ ಶಾ.. ಟೀಮ್ ಇಂಡಿಯಾಕ್ಕೆ ಮರಳುತ್ತಾರಾ ಮುಂಬೈ ಬ್ಯಾಟರ್?