ಮೆಲ್ಬೋರ್ನ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿತಾಸಕ್ತಿಗಳನ್ನು ಈಡೇರಿಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಒಪ್ಪಂದಗಳನ್ನು ಉಲ್ಲಂಘಿಸಿದೆ. ಈ ಮೂಲಕ ಬಿಸಿಸಿಐಗೆ ಆಸ್ಟ್ರೇಲಿಯಾ ಆಡಳಿತ ಮಂಡಳಿ ಹೆದರಿಕೊಂಡಿದೆ ಎಂದು ಚಾನೆಲ್-7 (ಆಸ್ಟ್ರೇಲಿಯಾ ಕ್ರೀಡಾ ಪ್ರಸಾರಕ ವಾಹಿನಿ ಚಾನೆಲ್-7) ಆರೋಪಿಸಿದೆ.
ಒಪ್ಪಂದ ಉಲ್ಲಂಘಿಸಿರುವ ಕುರಿತು ಸಾಬೀತುಪಡಿಸಲು ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಚಾನೆಲ್-7 ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರ ಕುರಿತು 'ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ದೃಢಪಡಿಸಿದೆ.
ಮೊದಲಿನ ಒಪ್ಪಂದದಂತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ, ವೇಳಾಪಟ್ಟಿ ಪ್ರಕಾರ ಮೊದಲು ಟೆಸ್ಟ್ ಸರಣಿ ಆರಂಭಿಸಬೇಕಿತ್ತು. ಆ ನಂತರ ಏಕದಿನ ಮತ್ತು ಟಿ20 ಸರಣಿ ನಡೆಸಬೇಕಿತ್ತು. ಆಸ್ಟ್ರೇಲಿಯಾ ಆಡಳಿತ ಮಂಡಳಿಯು ಬಿಸಿಸಿಐ ಹೇಳಿದಂತೆ ನಡೆದುಕೊಂಡಿದ್ದು, ಸಂಪೂರ್ಣ ವೇಳಾಪಟ್ಟಿಯನ್ನು ಬದಲಿಸಿದೆ ಎಂದು ಮಾಧ್ಯಮ ಸಂಸ್ಥೆ ಹೇಳಿದೆ.
ಭಾರತದ ವಿರುದ್ಧದ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಈಗಾಗಲೇ ಪ್ರಾರಂಭಿಸಬೇಕಿತ್ತು. ಬದಲಾಗಿ, ಡಿಸೆಂಬರ್ 17 ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಟೆಸ್ಟ್ ಪಂದ್ಯ ನಡೆಸುವ ಮೂಲಕ ಕೊರೊನಾ ನಂತರ ಕ್ರಿಕೆಟ್ ಋತು ಪ್ರಾರಂಭಿಸಲು ಸಿಎ ಬಯಸಿತ್ತು. ಅದಕ್ಕೂ ಮುನ್ನವೇ ಸೀಮಿತ ಓವರ್ಗಳ ಸರಣಿ ನಡೆಯುತ್ತಿದೆ ಎಂದು ಸೆವೆನ್ ವೆಸ್ಟ್ ಮೀಡಿಯಾದ (ಚಾನೆಲ್-7) ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ವಾರ್ಬರ್ಟನ್ ಹೇಳಿದರು.
ಸಿಎ ಆಡಳಿತಾಧಿಕಾರಿಗಳು ತಮ್ಮ ತಲೆಯನ್ನು ಮರಳಿನಲ್ಲಿ ಇಟ್ಟಿದ್ದಾರೆ. ಬಿಸಿಸಿಐ ಹೇಳಿದಂತೆ ನಡೆದುಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಹೀಗ್ಯಾಕೆ ಬಿಸಿಸಿಐಗೆ ಆದ್ಯತೆ ಕೊಟ್ಟಿದೆ. ಈ ನಡೆ ನೋಡಿದರೆ, ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಶಕ್ತಿಶಾಲಿ ಆಡಳಿತ ಮಂಡಳಿಯಾದ ಬಿಸಿಸಿಐಗೆ ಸಿಎಯ ಉನ್ನತ ಮೇಲಧಿಕಾರಿಗಳು ಭಯಗೊಂಡಿದ್ದಾರೆ ಎಂಬುದು ಸತ್ಯ ಎಂದು ಮತ್ತೊಂದು ಪ್ರಸಾರಕ ಸಂಸ್ಥೆ ಫಾಕ್ಸ್ಟೆಲ್ ಆರೋಪಿಸಿದೆ.
ಸಿಎ ತನ್ನ 450 ಮಿಲಿಯನ್ ಡಾಲರ್ (ಆಸ್ಟ್ರೇಲಿಯನ್ ಡಾಲರ್) ಒಪ್ಪಂದ ಉಲ್ಲಂಘಿಸಿದೆ ಎಂದು ನ್ಯಾಯಾಲಯದ ಮುಂದೆ ಸಾಬೀತುಪಡಿಸಿದರೆ, ಸೆವೆನ್ಗೆ ವರ್ಷಕ್ಕೆ 70 ಮಿಲಿಯನ್ ಹಣವನ್ನು ಪಾವತಿಸಬೇಕಾಗುತ್ತದೆ. ಈ ಚಾನೆಲ್ನೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.