ನವದೆಹಲಿ : ಭಾರತದ ಎರಡನೇ ಗೋಡೆ ಎಂದೇ ಖ್ಯಾತಿ ಪಡೆದಿರುವ ಚೇತೇಶ್ವರ್ ಪೂಜಾರ ಅವರನ್ನು ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ, ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಮಿಂಚಿದ ಪೂಜಾರ, ಭಾರತ ತಂಡದ ಪರ ಸೀಮಿತ ಓವರ್ಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಹೊರ ಹಾಕಿದ್ದಾರೆ.
ಟೀಂ ಇಂಡಿಯಾ ಪರ ಕೇವಲ 5 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಪೂಜಾರ, 51 ರನ್ ಗಳಿಸಿದ್ದಾರೆ. 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೊನೆಯ ಬಾರಿಗೆ ಕಾಣಿಸಿದ್ದರು. ಸೀಮಿತ ಓವರ್ಗಳ ಪಂದ್ಯಕ್ಕೆ ಸ್ಥಾನ ಪಡೆಯುವ ಆಶಯ ಇನ್ನೂ ಕೈಬಿಟ್ಟಿಲ್ಲ ಎಂದು ಕ್ರಿಕೆಟ್ ವೆಬ್ಸೈಟ್ ಸ್ಪೋರ್ಟ್ಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನಗೆ ಸೀಮಿತ ಓವರ್ಗಳ ಸ್ಥಾನ ಪಡೆಯುವ ಬಯಕೆ ಹೆಚ್ಚಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಉಳಿದ ಆಟಗಾರರಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತಿರುವ ಕಾರಣ ಮರಳಿ ಸ್ಥಾನ ಪಡೆಯುವುದು ಸವಾಲಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಯಾವುದೇ ಅಭ್ಯಾಸದಲ್ಲಿ ಕಾಣಿಸಿರಲಿಲ್ಲ. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ಎದುರಿನ ಸರಣಿಗೆ ಅಭ್ಯಾಸವಿಲ್ಲದೆ ತೆರಳುವುದು ಕಠಿಣ. ಆದರೆ, ನನ್ನೆಲ್ಲಾ ಅಭ್ಯಾಸಗಳಿಗೆ ಕೊರೊನಾ ಅಡ್ಡಿಪಡಿಸಿತು.
ಹಾಗಾಗಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಒಂದು ಅಭ್ಯಾಸ ಪಂದ್ಯದಲ್ಲಿ ಮಾತ್ರ ಆಡಿದ್ದೆ ಎಂದರು. ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಚೆನ್ನೈನಲ್ಲಿ ಹೋಟೆಲ್ ಕ್ವಾರಂಟೈನ್‌ನಲ್ಲಿರುವ ಪೂಜಾರ, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆಯಲ್ಲಿದ್ದಾರೆ.