ನವದೆಹಲಿ: ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ತಂಡದಲ್ಲಿ ಬೌಲಿಂಗ್ನಲ್ಲಿ ಮಿಂಚಿದ ಮೊಹಮ್ಮದ್ ಶಮಿ ಅವರ ಹೆಸರು ಅರ್ಜುನ ಪ್ರಶಸ್ತಿಯ ಪಟ್ಟಿಯಲ್ಲಿ ಸೇರಿಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿದ್ದಾರೆ. ಕ್ರೀಡಾ ವಿಭಾಗಕ್ಕೆ ನೀಡಲಾಗುವ ರಾಷ್ಟ್ರೀಯ ಮಟ್ಟದ ಎರಡನೇ ಅತ್ಯುನ್ನತ ಕ್ರೀಡಾ ಗೌರವ ಇದಾಗಿದೆ.
ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಆಯ್ಕೆ ಸಮಿತಿಯು ಶಮಿ ಅವರ ಹೆಸರನ್ನು ಈ ವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಮೂಲಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿಯನ್ನು ಮಾಡಿದೆ. ಈ ಹಿಂದೆ ಶಮಿ ಹೆಸರು ಪಟ್ಟಿಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ವಿಶ್ವಕಪ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಅವಕಾಶ ಸಿಗದಿದ್ದರೂ, ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರ ನಡೆದ ನಂತರ ಆಡುವ ಬಳಗದಲ್ಲಿ ಶಮಿ ಕಾಣಿಸಿಕೊಂಡರು. ನಂತರ ಬೆನ್ನು ಬೆನ್ನು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ವಿಶ್ವಕಪ್ನಲ್ಲಿ ಭಾರತದ ಟಾಪ್ ಬೌಲರ್ ಆಗಿ ಹೊರಮ್ಮಿದರು. ಏಕದಿನ ವಿಶ್ವಕಪ್ನಲ್ಲಿ 12.6ರ ಸರಾಸರಿ ಮತ್ತು 5.68ರ ಎಕಾನಮಿ ದರದಲ್ಲಿ 15 ವಿಕೆಟ್ ಕಬಳಿಸಿದರು. ವಿಶ್ವಕಪ್ ಮುಕ್ತಾಯದ ವೇಳೆಗೆ 7 ಇನ್ನಿಂಗ್ಸ್ನಲ್ಲಿ 3 ಬಾರಿ 5 ವಿಕೆಟ್ ಪಡೆದು ಒಟ್ಟಾರೆ 24 ವಿಕೆಟ್ ಕಬಳಿಸಿ ಟಾಪ್ ಬೌಲರ್ ಆಗಿ ಹೊರಹೊಮ್ಮಿದರು.
ಆಸ್ಟ್ರೇಲಿಯಾ, ಆಫ್ಘನ್, ಪಾಕ್ ಮತ್ತು ಬಾಂಗ್ಲಾ ದೇಶದ ವಿರುದ್ಧ ಶಮಿ ಆಡಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಭಾರತದ ಐದನೇ ಪಂದ್ಯದಲ್ಲಿ ಶಮಿ ಮಿಂಚಿದರು. ಈ ಪಂದ್ಯದಲ್ಲಿ 10 ಓವರ್ ಮಾಡಿದ ಅವರು 54 ರನ್ ಕೊಟ್ಟು 5 ವಿಕೆಟ್ ಕಬಳಿಸಿದರು. ನಂತರದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 5 ಓವರ್ ಮಾಡಿ 18 ರನ್ ಕೊಟ್ಟು ಐದು ವಿಕೆಟ್ ಕಬಳಿಸಿ ಏಕದಿನ ಕ್ರಿಕೆಟ್ನ ಬೆಸ್ಟ್ ಪ್ರದರ್ಶನ ನೀಡಿದರು. ನಂತರ ಕಿವೀಸ್ ವಿರುದ್ಧದ ಸೆಮೀಸ್ ಪಂದ್ಯದಲ್ಲೂ ಶಮಿ ಮಿಂಚಿನ ದಾಳಿ ಭಾರತದ ಗೆಲುವಿಗೆ ಕಾರಣವಾಗಿತ್ತು.
50ಕ್ಕೂ ಹೆಚ್ಚು ವಿಕೆಟ್ ದಾಖಲೆ: ವಿಶ್ವಕಪ್ನಲ್ಲಿ 50ಕ್ಕೂ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯನ್ನು ಶಮಿ ಸೇರಿಕೊಂಡಿದ್ದಾರೆ. ಲಸಿತ್ ಮಾಲಿಂಗ (56), ಮಿಚೆಲ್ ಸ್ಟಾರ್ಕ್ (65), ಮುತ್ತಯ್ಯ ಮುರಳೀಧರನ್ (68), ಮತ್ತು ಗ್ಲೆನ್ ಮೆಕ್‌ಗ್ರಾತ್ (71) ಇವರಿಗಿಂತ ಮೊದಲು ಈ ಸಾಧನೆಯನ್ನು ಮಾಡಿದ್ದಾರೆ. ಶಮಿ ಒಟ್ಟಾರೆ ಅವರ ವೃತ್ತಿಜೀವನದ ವಿಶ್ವಕಪ್ ಪಂದ್ಯಗಳಲ್ಲಿ 55 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: U-19 ಏಷ್ಯಾ ಕಪ್: 7 ವಿಕೆಟ್ ಪಡೆದು ಮಿಂಚಿದ ರಾಜ್ ಲಿಂಬಾನಿ, ನೇಪಾಳ ವಿರುದ್ಧ ಗೆದ್ದ ಭಾರತ ಸೆಮೀಸ್ಗೆ