ನವದೆಹಲಿ : 2023ರ ಏಕದಿನ ವಿಶ್ವಕಪ್ಗೂ ಮುನ್ನವೇ ಭಾರತ ತಂಡ ಮಧ್ಯಮ ಕ್ರಮಾಂಕಕ್ಕೆ ಅಗತ್ಯವಿರುವ ಸ್ಫೋಟಕ ಬ್ಯಾಟರ್ಗಳನ್ನು ಸೇರಿಸುವ ಅಗತ್ಯವಿದೆ ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ ಕ್ರಮಾಂಕಗಳನ್ನು ಖಚಿತಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ದಶಕದ ಬಳಿಕ ಏಕದಿನ ವಿಶ್ವಕಪ್ ಭಾರತಕ್ಕೆ ಮರಳುತ್ತಿದೆ. ಭಾನುವಾರ ವಿಂಡೀಸ್ ವಿರುದ್ಧ ವಿಶ್ವಕಪ್ ತಯಾರಿಯಾಗಿ ಮೊದಲ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಅಧಿಕೃತವಾಗಿ ನಾಯಕನಾಗಿ ಮುನ್ನಡೆಸಲಿದ್ದಾರೆ.
"ಯಾವ ಕ್ರಮಾಂಕಗಳಿಗೆ ಯಾವ ಆಟಗಾರರು ಸೂಕ್ತ ಎನ್ನುವುದನ್ನು ಈಗಲೇ ಅಂತಿಮಗೊಳಿಸಬೇಕು. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೋ ಅಥವಾ ಅವರು ಎಲ್ಲಿ ಆಡಬೇಕು ಎಂಬುವುದನ್ನೂ ಸಮೀಪಿಸುತ್ತಿರುವ ವಿಶ್ವಕಪ್ಗೂ ಮುನ್ನ ಖಚಿತಗೊಳಿಸಬೇಕು. ಒಂದು ವೇಳೆ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆಂದರೆ ಅದಕ್ಕೆ ಅವರು ಅಂಟಿಕೊಳ್ಳಬೇಕು" ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಅಗರ್ಕರ್ ಹೇಳಿದ್ದಾರೆ.
ರಾಹುಲ್ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕು. ಏಕೆಂದರೆ, ಪ್ರಸ್ತುತ 4,5 ಮತ್ತು 6ನೇ ಕ್ರಮಾಂಕದಲ್ಲಿ ಅಂತರವಿದೆ. ವಿಶ್ವಕಪ್ ಗೆಲ್ಲಬೇಕೆಂದರೆ ಆ ಜಾಗಗಳಿಗೆ ಕೆಲವು ಸ್ಫೋಟಕ ಬ್ಯಾಟರ್ಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರು ನಾಯಕನಾದ ಬಳಿಕ ಇದು ಅವರ ಮೊದಲ ಏಕದಿನ ಸರಣಿಯಾಗಿದೆ. ಅವರು ಈಗಾಗಲೇ ಇಶಾನ್ ಕಿಶನ್ ತಮ್ಮ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ, 2ನೇ ಪಂದ್ಯಕ್ಕೆ ರಾಹುಲ್ ಆಗಮಿಸಲಿದ್ದಾರೆ.
ಆ ವೇಳೆ ಇಶಾನ್ರನ್ನೇ ಮುಂದುವರಿಸಲಿದ್ದಾರಾ ಅಥವಾ ರಾಹುಲ್ರನ್ನು ಮತ್ತೆ ಆರಂಭಿಕ ಸ್ಥಾನದಲ್ಲಿ ಆಡಿಸಲಿದ್ದಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ. 13ನೇ ಆವೃತ್ತಿಯ ಏಕದಿನ ವಿಶ್ವಕಪ್ 2023 ಅಕ್ಟೋಬರ್-ನವೆಂಬರ್ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ.
ಇದನ್ನೂ ಓದಿ:ವಿಂಡೀಸ್ ಏಕದಿನ ಸರಣಿ : ಸಚಿನ್ ಹೆಸರಿನಲ್ಲಿರುವ ವಿಶ್ವದಾಖಲೆ ಮುರಿಯಲಿರುವ ಕೊಹ್ಲಿ