ನವದೆಹಲಿ: ಶುಭ್‌ಮನ್ ಗಿಲ್, ಭಾರತ ಕ್ರಿಕೆಟ್ ತಂಡದ ಸದ್ಯದ ಸ್ಟಾರ್ ಬ್ಯಾಟರ್. ಉದಯೋನ್ಮುಖ ಆಟಗಾರ ಕಳೆದ ಐಪಿಎಲ್ ಸೀಸನ್ನಲ್ಲಿ ರನ್ ಮಳೆಯೇ ಹರಿಸಿದ್ದಾರೆ. ಸಹಜವಾಗಿಯೇ ಅಭಿಮಾನಿಗಳು ಹೆಚ್ಚಿದ್ದಾರೆ. ಹೋದ ಬಂದಲ್ಲೆಲ್ಲಾ ಗಿಲ್ರನ್ನು ಜನರು ಮುತ್ತಿಕೊಳ್ಳುತ್ತಿದ್ದಾರೆ. ಇದು ಆಟಗಾರನಿಗೆ ಹೆಮ್ಮೆಯಾದರೂ ಕೆಲವೊಮ್ಮೆ ಭಾರೀ ಕಿರಿಕಿರಿ ಉಂಟು ಮಾಡುತ್ತದೆ. ಅಂಥದ್ದೇ ಒಂದು ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಅಭಿಮಾನಿಗಳು ಆಟಗಾರನ ಬಳಿ ಒತ್ತಾಯಪೂರ್ವಕವಾಗಿ ಸೆಲ್ಫಿ ಪಡೆದಿದ್ದಾರೆ.
ಗಿಲ್ ವಿಮಾನ ನಿಲ್ದಾಣದಿಂದ ಹೊರಹೋಗುತ್ತಿದ್ದಾಗ, ಅಲ್ಲಿದ್ದ ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕೆಲವರ ಜೊತೆ ಪೋಸ್ ನೀಡಿದ ಆಟಗಾರ ಬಳಿಕ, ಅಲ್ಲಿಂದ ಹೊರಡಲು ಯತ್ನಿಸಿದ್ದಾರೆ. ಆದರೆ, ಬಿಡದ ಅಭಿಮಾನಿಗಳು ಸರತಿಯಲ್ಲಿ ಬಂದು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಹೊರಡುವ ಧಾವಂತದಲ್ಲಿದ್ದ ಆಟಗಾರನಿಗೆ ಇದು ಕಿರಿಕಿರಿ ಉಂಟು ಮಾಡಿದೆ. ಗಿಲ್ ಅವರನ್ನು ಹೊರಡಲು ಬಿಡದ ಫ್ಯಾನ್ಸ್ ಚಿತ್ರ ತೆಗೆದುಕೊಳ್ಳುತ್ತಿದ್ದರು.
ಈ ವೇಳೆ, ಅಲ್ಲಿಂದ ತೆರಳಲು ಮುಂದಾದ ಗಿಲ್ರನ್ನು ಬಿಡದ ಜನರು ಸೆಲ್ಫಿಗಾಗಿ ಒತ್ತಾಯ ಮಾಡಿದರು. ಆದರೂ ಆಟಗಾರ ಅಲ್ಲಿಂದ ಮುಂದೆ ಸಾಗಿದರು. ಇದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಆಟಗಾರ ಕಸಿವಿಸಿಯಿಂದಲೇ ಅಲ್ಲಿಂದ ಹೋಗಿದ್ದು, ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.
ಜಾಲತಾಣಗಳಲ್ಲಿ ಸಕ್ರಿಯ: ಶುಭ್‌ಮನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ತನ್ನ ಅಭಿಮಾನಿಗಳಿಗಾಗಿ ಅಂತರ್ಜಾಲದಲ್ಲಿ ಯಾವುದಾದರೂ ಚಿತ್ರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಟೀಂ ಇಂಡಿಯಾದ ಮುಂದಿನ ನಾಯಕ ಎಂದು ಕೂಡ ಗಿಲ್ ಬಿಂಬಿತರಾಗಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ಈಚೆಗೆ ನಡೆದ ವಿದ್ಯಮಾನದಿಂದಾಗಿ ಅಭಿಮಾನಿಗಳೊಂದಿಗೆ ಸ್ವಲ್ಪ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: Ashes 2023: ಸತತ 100 ಟೆಸ್ಟ್ ಪಂದ್ಯ ಆಡಿದ ನಾಥನ್ ಲಿಯಾನ್; ಈ ಸಾಧನೆ ಮಾಡಿದ ಭಾರತೀಯ ಆಟಗಾರರು ಯಾರು ಗೊತ್ತೇ?
ಐಪಿಎಲ್‌ನಲ್ಲಿ ಮಿಂಚಿನ ಬ್ಯಾಟಿಂಗ್: ಶುಭ್‌ಮನ್ ಗಿಲ್ ಈಚೆಗೆ ಮುಗಿದ ಐಪಿಎಲ್‌ನಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದರು. ರನ್ ಗಳಿಕೆಯಲ್ಲಿ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಿಲ್ ತಮ್ಮ ಬ್ಯಾಟ್‌ನಿಂದ ರನ್ ಹೊಳೆ ಹರಿಸಿ, ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿ ಜಯಿಸಿದರು. ಇದರಿಂದಾಗಿ ಅಭಿಮಾನಿಗಳು ಗಿಲ್ರನ್ನು ಮುಂದಿನ ವಿರಾಟ್ ಕೊಹ್ಲಿ ಎಂದು ಪರಿಗಣಿಸಲು ಆರಂಭಿಸಿದ್ದಾರೆ. ಗಿಲ್ ಬಾರಿಸುವ ಹೊಡೆತಗಳನ್ನು ಕಿಂಗ್ ಕೊಹ್ಲಿಗೆ ಹೋಲಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಿಲ್ರ ಆಟವನ್ನು ಪ್ರಶಂಸಿಸಿ ಪೋಸ್ಟ್ ಹಾಕಿದ್ದರು.
ಐಪಿಎಲ್ -2023 ರಲ್ಲಿ ಗಿಲ್ ಪ್ರತಿನಿಧಿಸುವ ಗುಜರಾತ್ ಟೈಟಾನ್ಸ್ ತಂಡ ಸೋತರೂ, ಋತುವಿನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಐಪಿಎಲ್ನ ಆರೆಂಜ್ ಕ್ಯಾಪ್ ಗೆದ್ದುಕೊಂಡರು. ಆಡಿದ 17 ಇನ್ನಿಂಗ್ಸ್‌ಗಳಲ್ಲಿ ಒಟ್ಟು 890 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: Ashes Second Test: ಮೊದಲ ದಿನದ ಆಟದಲ್ಲಿ ಮೆಲುಗೈ ಸಾಧಿಸಿದ ಆಸೀಸ್.. ಮೂವರಿಂದ ಭರ್ಜರಿ ಅರ್ಧ ಶತಕ