ವೈಟ್ ಬಾಲ್ ಇತಿಹಾಸದಲ್ಲಿ ಭಾರತವು ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡವಾಗಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಟೀಕಿಸಿದ್ದಾರೆ. ಆಡಿಲೇಡ್ನಲ್ಲಿ ಆಂಗ್ಲರ ವಿರುದ್ಧ ಸೋತು ಟಿ20 ವಿಶ್ವಕಪ್ನಿಂದ ಹೊರಬಿದ್ದ ಬೆನ್ನಲ್ಲೇ ವಾನ್ ಟೀಕಾಪ್ರಹಾರ ನಡೆಸಿದ್ದಾರೆ.
'ಇತಿಹಾಸದಲ್ಲಿ ಭಾರತವು ಅತ್ಯಂತ ಕೆಟ್ಟ ಪ್ರದರ್ಶನ ತೋರಿದ ವೈಟ್ ಬಾಲ್ ತಂಡವಾಗಿದೆ' ಎಂದು ವಾನ್ ದಿ ಟೆಲಿಗ್ರಾಫ್ಗೆ ಬರೆದ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ. 'ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ವಿಶ್ವದ ಪ್ರತಿಯೊಬ್ಬ ಆಟಗಾರನೂ ಸಹ ಅಲ್ಲಿಂದ ತಮ್ಮ ಆಟ ಸುಧಾರಿಸಿಕೊಂಡ ಬಗ್ಗೆ ಮಾತನಾಡುತ್ತಾರೆ. ಆದರೆ ಭಾರತ ತಂಡದಲ್ಲಿ ಏನಾಗಿದೆ' ಎಂದು ಅವರು ಪ್ರಶ್ನಿಸಿದ್ದಾರೆ?
'ಭಾರತವು ಹಲವಾರು ವರ್ಷಗಳಿಂದ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದೆ. 2011ರಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ಸಾಧನೆಯೇನು? ಏನೂ ಇಲ್ಲ. ಅದ್ಭುತ ಪ್ರತಿಭೆ ರಿಷಭ್ ಪಂತ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ' ಎಂದು ವಾನ್ ಭಾರತ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಿಷಭ್ ಪಂತ್ ಅವರಂತಹ ಆಟಗಾರನ್ನು ಕಡೆಗಣಿಸಲಾಗುತ್ತಿದೆ ಎಂಬುದನ್ನು ನಂಬಲಸಾಧ್ಯ. ಅವರಿಗೆ ಅಗ್ರಸ್ಥಾನ ನೀಡಬೇಕು. ಪಂತ್ರಲ್ಲಿನ ಟಿ20 ಶೈಲಿಯ ಬ್ಯಾಟಿಂಗ್ ಕಂಡು ನಾನು ಹಲವು ಸಲ ದಿಗ್ಭ್ರಮೆಗೊಂಡಿದ್ದೇನೆ. ತಂಡದಲ್ಲಿ ಆಟಗಾರರಿದ್ದಾರೆ, ಆದರೆ ಆಡಿಸುತ್ತಿರುವ ಪ್ರಕ್ರಿಯೆ ಸರಿಯಾಗಿಲ್ಲ. ಮೊದಲ ಐದು ಓವರ್‌ಗಳಲ್ಲಿ ಆರಂಭಿಕರು ಎದುರಾಳಿ ಬೌಲರ್‌ಗಳ ವಿರುದ್ಧ ರನ್ ಗಳಿಸದಿರುವುದು ಯಾಕೆ' ಎಂದು ಪ್ರಶ್ನಿಸಿದ್ದಾರೆ.
ತಂಡದಲ್ಲಿ ಆಲ್‌ರೌಂಡರ್ಸ್ ಕೊರತೆಯನ್ನೂ ಬೆರಳು ಮಾಡಿ ತೋರಿಸಿರುವ ವಾನ್, '10 ಅಥವಾ 15 ವರ್ಷಗಳ ಹಿಂದೆ ಭಾರತದ ಎಲ್ಲ ಅಗ್ರ 6 ಬ್ಯಾಟರ್ಗಳೂ ಸ್ವಲ್ಪಮಟ್ಟಿಗೆ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಆದರೀಗ ಯಾವುದೇ ಬ್ಯಾಟರ್ ಕೂಡ ಬೌಲ್ ಮಾಡುವುದಿಲ್ಲ. ಹೀಗಾಗಿ ನಾಯಕನಿಗೆ ಕೇವಲ ಐದು ಆಯ್ಕೆ ಮಾತ್ರ ಇವೆ. ಟಿ-20 ಕ್ರಿಕೆಟ್ ಅಂಕಿಅಂಶ ಗಮನಿಸಿದರೆ ತಂಡಗಳಿಗೆ ಎರಡೂ ಕಡೆ ಸ್ಪಿನ್ ಮಾಡಬಲ್ಲ ಸ್ಪಿನ್ನರ್ ಎಂಬ ಅಂಶ ತಿಳಿಯುತ್ತದೆ. ಭಾರತ ಸಾಕಷ್ಟು ಲೆಗ್ ಸ್ಪಿನ್ನರ್‌ಗಳನ್ನು ಹೊಂದಿದೆ, ಆದರೆ ಎಲ್ಲಿದ್ದಾರೆ?' ಎಂದು ವಾನ್ ಪ್ರಶ್ನೆ ಮಾಡಿದ್ದಾರೆ.
'ವೇಗಿ ಜಸ್ಪ್ರೀತ್ ಬುಮ್ರಾ, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ತಂತ್ರಗಳ ಬಗ್ಗೆ ವಾನ್ ಪ್ರಶ್ನಿಸಿದ್ದಾರೆ. ಆರ್ಷದೀಪ್ ಸಿಂಗ್ ಎಡಗೈ ಬೌಲರ್ ಆಗಿದ್ದು, ಬಲಗೈ ಬ್ಯಾಟರ್ಗಳಿಗೆ ಇನ್ಸ್ವಿಂಗ್ ಮಾಡಬಲ್ಲರು. ಈ ಬೌಲರ್ಗಳು 168 ರನ್ ಡಿಪೆಂಡ್ ಮಾಡಬಹುದಾ? ಇನ್ನೊಂದೆಡೆ ಭುವನೇಶ್ವರ್ ಕುಮಾರ್ ಅವರು ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಎದುರು ಔಟ್ ಸಿಂಗ್ ಮಾಡುವ ಯತ್ನದಲ್ಲಿ ಹೊಡೆತಗಳನ್ನು ಬಾರಿಸಲು ಸಾಕಷ್ಟು ಅವಕಾಶ ನೀಡಿದರು. ಮೊದಲ ಓವರ್ನಿಂದಲೇ ನಿರಾಯಾಸವಾಗಿ ಬ್ಯಾಟ್ ಬೀಸಲು ಆಹ್ವಾನಿಸಿದರು' ಎಂದು ಬರೆದಿದ್ದಾರೆ.
ಭಾರತವು ಕ್ರಿಕೆಟ್ ಆಡುವ ಪ್ರಮುಖ ಹಾಗೂ ಜನಪ್ರಿಯ ತಂಡ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದಾರೆ. ವಿಶ್ವ ಕ್ರಿಕೆಟ್‌ಗೆ ಭಾರತವು ಬಹಳ ಮುಖ್ಯವಾಗಿದೆ. ಅವರು ಹೊಂದಿರುವ ಎಲ್ಲ ಅನುಕೂಲಗಳಿಂದ ಇನ್ನೂ ಹೆಚ್ಚು ಗೆಲ್ಲಬೇಕು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಂದಿನ ಟಿ20 ವಿಶ್ವಕಪ್‌ನಲ್ಲಿ ಕೆಲವು ಮುಖಗಳನ್ನು ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್