ದುಬೈ : ಮುಂದಿನ ವರ್ಷ ಎಂ ಎಸ್ ಧೋನಿ ಐಪಿಎಲ್ನಲ್ಲಿ ಆಡುವುದಿಲ್ಲವೆಂದರೆ ನಾನೂ ಕೂಡ ಆಡುವುದಿಲ್ಲ ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಹೇಳಿದ್ದಾರೆ.
ಕ್ರಿಕೆಟ್ ಹೊರತುಪಡಿಸಿಯೂ ಮೈದಾನದ ಹೊರಗೆ ಎಂ ಎಸ್ ಧೋನಿ ಅವರೊಂದಿಗೆ ಹೆಚ್ಚು ಬಾಂಧವ್ಯ ಹೊಂದಿರುವ ಆಟಗಾರ ಅಂದರೆ ಅದು ಸುರೇಶ್ ರೈನಾ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ಅದು ಅವರಿಬ್ಬರ ನಡುವಿನ ಸ್ನೇಹಕ್ಕೆ ಸಾಕ್ಷಿಯಾಗಿತ್ತು.
14 ವರ್ಷಗಳ ಕಾಲ ಒಟ್ಟಾಗಿ ಕ್ರಿಕೆಟ್ ಆಡಿರುವ ಇವರಿಬ್ಬರು ಕಳೆದ ಒಂದು ದಶಕದಿಂದ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದಾರೆ. ಸಿಎಸ್ಕೆ ತಂಡಕ್ಕೆ ಧೋನಿ ಏಕೈಕ ನಾಯಕನಾಗಿದ್ದರೆ, ರೈನಾ ತಂಡದ ಉಪನಾಯಕನಾಗಿ ಆಡಿದ್ದಾರೆ.
ಧೋನಿ ಮತ್ತು ಸುರೇಶ್ ರೈನಾ ನಡುವೆ ಅನ್ಯೋನ್ಯ ಸ್ನೇಹವಿದೆ. 2014ರಲ್ಲಿ ಧೋನಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ವೇಳೆ ಮೊಬೈಲ್ ತೆಗೆದುಕೊಂಡು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ಸಾಕ್ಷಿ ತಮ್ಮ ಮಗಳು ಜೀವಾಳಿಗೆ ಜನ್ಮ ನೀಡಿದ್ದ ವಿಷಯವನ್ನು ರೈನಾಗೆ ಕರೆ ಮಾಡಿ ಧೋನಿ ವಿಷಯ ತಿಳಿಸುವಂತೆ ಹೇಳಿದ್ದರು.
ಹೀಗೆ ಧೋನಿಯನ್ನೇ ಹೆಚ್ಚು ಅನುಸರಿಸುವ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ವೇಳೆ ಕೂಡ ಅದನ್ನೇ ಮಾಡಿದ್ದರು. ಇದೀಗ ಮುಂದಿನ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಧೋನಿ ಆಡಿದರೆ ಮಾತ್ರ ಆಡುತ್ತೇನೆ ಎಂದು ರೈನಾ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನ್ನಲ್ಲಿ ಇನ್ನೂ ನಾಲ್ಕೈದು ವರ್ಷಗಳ ಕ್ರಿಕೆಟ್ ಉಳಿದಿದೆ. ನಾವು ಈ ವರ್ಷ ಐಪಿಎಲ್ ಪಡೆದುಕೊಂಡಿದ್ದೇವೆ. ಮುಂದಿನ ವರ್ಷ ಮತ್ತೆರಡು ತಂಡಗಳು ಸೇರಿಕೊಳ್ಳಲಿವೆ. ಆದರೆ, ನಾನು ಆಡಿದರೆ ಸಿಎಸ್ಕೆ ಫ್ರಾಂಚೈಸಿಗೆ ಮಾತ್ರ. ಈ ವರ್ಷ ನಾವು ಉತ್ತಮವಾಗಿ ಆಡಲಿದ್ದೇವೆ ಎಂಬ ವಿಶ್ವಾಸವಿದೆ.
ಆದರೆ, ಮುಂದಿನ ಆವೃತ್ತಿಯಲ್ಲಿ ಧೋನಿ ಭಾಯ್ ಆಡದಿದ್ದರೆ ನಾನೂ ಕೂಡ ಆಡುವುದಿಲ್ಲ. ನಾವು 2008ರಿಂದ ಒಟ್ಟಿಗೆ ಆಡುತ್ತಿದ್ದೇವೆ. ನಾವೇನಾದರೂ ಈ ವರ್ಷ ಟ್ರೋಫಿ ಗೆದ್ದರೆ ಮುಂದಿನ ವರ್ಷವೂ ಕೂಡ ಆಡಲು ನಾನು ಅವರನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ಆದರೆ, ಅವರು ಆಡದಿದ್ದರೆ, ನಾನು ಬೇರೆ ಯಾವುದೇ ಫ್ರಾಂಚೈಸಿ ಪರ ಆಡುವುದಕ್ಕೆ ಬಯಸುವುದಿಲ್ಲ ಎಂದು ರೈನಾ ಹೇಳಿದ್ದಾರೆ.
ಇದನ್ನು ಓದಿ:ವಿಶ್ವಕಪ್ನಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಧೋನಿ ಯಾವುದೇ ಗೌರವಧನ ಪಡೆಯುತ್ತಿಲ್ಲ : ಜಯ್ ಶಾ