ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಪಾಳಯದಲ್ಲಿ ವೈರಲ್ ಜ್ವರ ಕಾಣಿಸಿಕೊಂಡಿದೆ. ತಂಡದ ಕೆಲ ಆಟಗಾರರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆ ಪಾಕ್ ತಂಡ ಮಂಗಳವಾರದ ಅಭ್ಯಾಸದಲ್ಲಿ ತೊಡಗಿಲ್ಲ ಎಂದು ತಿಳಿದು ಬಂದಿದೆ. ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಕ್ವಾರಂಟೈನ್ನಲ್ಲಿದ್ದು, ಶಹೀನ್ ಶಾ ಅಫ್ರಿದಿ, ಸೌದ್ ಶಕೀಲ್, ಜಮಾನ್ ಖಾನ್ ಸಹ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ ತಂಡದ ಕೆಲ ಆಟಗಾರರು ಮಂಗಳವಾರ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಎಂಬುದನ್ನು ಪಾಕಿಸ್ತಾನ ತಂಡದ ವಕ್ತಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನವೇ ಜ್ವರಕ್ಕೆ ತುತ್ತಾಗಿದ್ದ ಉಸ್ಮಾನ್ ಮೀರ್ ಪಂದ್ಯದಿಂದ ಹೊರಗುಳಿದಿದ್ದರು. ಯಾವ ಆಟಗಾರರಿಗೂ ಸಹ ಡೆಂಗ್ಯೂ ಲಕ್ಷಣಗಳಿಲ್ಲ. ವೈದ್ಯಕೀಯ ತಂಡ ಆಟಗಾರರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ವೇಗಿ ಶಹೀನ್ ಶಾ ಫಿಟ್ ಆಗುವ ಭರವಸೆಯಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದ ಕೆಲ ಆಟಗಾರರನ್ನು ಹೊರತುಪಡಿಸಿ ಇನ್ನುಳಿದ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ವೇಳೆ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅಭಿಮಾನಿಗಳಿಗೆ ತಮ್ಮ ಆಟೋಗ್ರಾಫ್ ನೀಡುತ್ತಿರುವುದು ಕಂಡುಬಂತು.
ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನವೇ ಡೆಂಗ್ಯೂ ಲಕ್ಷಣಗಳೊಂದಿಗೆ ಬಳಲುತ್ತಿದ್ದ ಶುಭ್ಮನ್ ಗಿಲ್ ಭಾರತದ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ನಂತರ ಪಾಕ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಕಣಕ್ಕಿಳಿದಿದ್ದರು. ಭಾನುವಾರ ಬೆಂಗಳೂರಿಗೆ ಬಂದಿಳಿದಿರುವ ಪಾಕಿಸ್ತಾನ ತಂಡ ಶುಕ್ರವಾರ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸಲಿದೆ.
ಓದಿ: ವಿಶ್ವಕಪ್ ಕ್ರಿಕೆಟ್‌ನಲ್ಲಿ ನೆದರ್ಲೆಂಡ್‌ಗೆ ಅಚ್ಚರಿಯ ಗೆಲುವು! ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಶೆ
ಭಾರತ ವಿರುದ್ಧ ಐಸಿಸಿಗೆ ಪಾಕ್ ದೂರು: ಭಾರತದೊಂದಿಗೆ ಕಿರಿಕ್ ಮಾಡುತ್ತಲೇ ಇರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರದ ಬಿಗಿ ಕ್ರಮಗಳು ಬಿಸಿ ಮುಟ್ಟಿಸಿವೆ. ಅದು ಕ್ರೀಡೆಗೂ ತಟ್ಟಿದೆ. ವಿಶ್ವಕಪ್ ಆಡಲು ಭಾರತಕ್ಕೆ ಬಂದಿರುವ ತಂಡ ಸೋಲು-ಗೆಲುವು ಕಾಣುತ್ತಿದ್ದರೆ, ಅದನ್ನು ಚಿಯರ್ ಮಾಡಲು ಅಭಿಮಾನಿಗಳೇ ಇಲ್ಲವಾಗಿದ್ದಾರೆ. ಜೊತೆಗೆ ತಮ್ಮ ಪತ್ರಕರ್ತರು ವರದಿ ಮಾಡಲು ಭಾರತಕ್ಕೆ ಬರಲು ಸರ್ಕಾರ ಬಿಡುತ್ತಿಲ್ಲ. ಅಭಿಮಾನಿಗಳನ್ನೂ ಇದೇ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಮಂಗಳವಾರ ದೂರು ನೀಡಿದೆ.
ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಅನ್ನು ವರದಿ ಮಾಡಲು ಪಾಕಿಸ್ತಾನಿ ಜರ್ನಲಿಸ್ಟ್ಗಳಿಗೆ ವೀಸಾ ವಿಳಂಬ ಮಾಡಲಾಗುತ್ತಿದೆ. ಅಭಿಮಾನಿಗಳಿಗೂ ಬರಲು ಅವಕಾಶ ನೀಡಲಾಗುತ್ತಿಲ್ಲ. ಜೊತೆಗೆ ವಿಶ್ವಕಪ್ನಲ್ಲಿ ತಂಡವನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ಸಲ್ಲಿಸಿದೆ.