ಬೆಂಗಳೂರು: ಕ್ರಿಕೆಟ್ ವಿಶ್ವಕಪ್ 2023ರ (ICC Cricket World Cup 2023) 18ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿದ್ದು, ಟಾಸ್ ಗೆದ್ದಿರುವ ಪಾಕಿಸ್ತಾನ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಇನ್ನು ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನ ತಂಡ 3 ಪಂದ್ಯಗಳಲ್ಲಿ 2 ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನವು ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲನ್ನು ಕಂಡಿದೆ. ಇನ್ನು 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ 3 ಪಂದ್ಯಗಳಲ್ಲಿ 1 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾವು ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಸೋಲುಗಳನ್ನು ಎದುರಿಸಬೇಕಾಯಿತು. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಆ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
2023ರ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಲು ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಈ ಪಂದ್ಯವನ್ನು ಗೆಲ್ಲಲು ಉಭಯ ತಂಡಗಳು ಸಂಪೂರ್ಣ ಶ್ರಮ ವಹಿಸಬೇಕಾಗಿದೆ. ಇಂದು ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಉಭಯ ತಂಡಗಳ ನಡುವೆ ನಡೆದ ಕೊನೆಯ 5 ಏಕದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾ 3 ಬಾರಿ ಪಂದ್ಯ ಗೆದ್ರೆ, ಪಾಕಿಸ್ತಾನ 2ರಲ್ಲಿ ಜಯ ಗಳಿಸಿದೆ.
ಬ್ಯಾಟಿಂಗ್ ಮಾಡಲು ಸುಲಭ: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಪಿಚ್ ಸಮತಟ್ಟಾಗಿದ್ದು, ಉತ್ತಮ ಬೌನ್ಸ್ ನೀಡುತ್ತದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗಲಿದೆ. ಆಟವು ಮುಂದುವರೆದಂತೆ ಸ್ಪಿನ್ನರ್‌ಗಳು ಮುಖ್ಯ ಪಾತ್ರವನ್ನು ವಹಿಸುವುದನ್ನು ಕಾಣಬಹುದಾಗಿದೆ. ಈ ಪಿಚ್‌ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 310 ರನ್ ಆಗಿದೆ. ಈ ಮೈದಾದನಲ್ಲಿ ರನ್ ಚೇಸಿಂಗ್ ಮಾಡಿರುವ ತಂಡಗಳು ಹೆಚ್ಚು ಯಶಸ್ವಿಯಾಗಿವೆ.
ಬಾಬರ್ ಆಜಮ್ ಹೇಳಿದ್ದು ಹೀಗೆ: ನಾವು ಮೊದಲು ಬೌಲ್ ಮಾಡುತ್ತೇವೆ. ಪಿಚ್ ನಿಜವಾಗಿಯೂ ಚೆನ್ನಾಗಿ ಕಾಣುತ್ತದೆ. ನಾವು ಚೆನ್ನಾಗಿ ಬೌಲಿಂಗ್ ಮಾಡುವ ಭರವಸೆ ನಮಗಿದೆ. ನಾವು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ. ಈ ಪಂದ್ಯದಲ್ಲಿ ಶಾದಾಬ್ ಆಡುತ್ತಿಲ್ಲ ಎಂದು ಟಾಸ್ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ ಹೇಳಿದ್ದರು.
ಪ್ಯಾಟ್ ಕಮ್ಮಿನ್ಸ್ನ ಮಾತು: ನಾವು ಜೊತೆಯಾಟದಲ್ಲಿ ದೊಡ್ಡ ಪಾಲುದಾರಿಕೆ ಹೊಂದಿದ್ದರೂ ಸಹ ನಮ್ಮ ಬ್ಯಾಟಿಂಗ್ ಶಕ್ತಿಯು ಅದ್ಭುತವಾಗಿದೆ. ನಮ್ಮ ಹುಡುಗರ ಉದ್ದೇಶ ಉತ್ತಮವಾಗಿದೆ. ಲಂಕಾ ವಿರುದ್ಧ ಆಡಿದ ರೀತಿಯಲ್ಲಿ ನಾವು ಮುನ್ನಡೆಯುತ್ತೇವೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪ್ಯಾಟ್ ಕಮ್ಮಿನ್ಸ್ ಹೇಳಿದರು.
ಆಸ್ಟ್ರೇಲಿಯಾ 11ರ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್..
ಪಾಕಿಸ್ತಾನ 11ರ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ನಾಯಕ ಬಾಬರ್ ಅಜಮ್, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್..