ನವದೆಹಲಿ: ಡೆಂಘೀಯಿಂದ ಬಳಲುತ್ತಿದ್ದ ಶುಭಮನ್ ಗಿಲ್ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂಗತಿ ತಿಳಿದೇ ಇದೆ. ಅಫ್ಘಾನಿಸ್ತಾನದೊಂದಿಗಿನ ಇಂದಿನ ಪಂದ್ಯಕ್ಕೆ (IND vs AFG) ಅವರು ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ಘೋಷಿಸಿದೆ. ಆದರೆ, ಶನಿವಾರ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಿಲ್ ಆಡಲಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರು ಚೆನ್ನೈನಿಂದ ಅಹಮದಾಬಾದ್‌ಗೆ ಹೋಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇತ್ತೀಚೆಗೆ ಭಾರತೀಯ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸುದ್ದಿಯ ಬಗ್ಗೆ ಪ್ರಮುಖ ಅಪ್ಡೇಟ್ ನೀಡಿದ್ದಾರೆ. ಅದೇ ರೀತಿ ಗಿಲ್ ಅವರ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಗಿಲ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದು ನಿಜ. ನಾವು ಇದನ್ನು ಮೊದಲು ಎಚ್ಚರಿಕೆಯಿಂದ ಮಾಡಿದ್ದೇವೆ. ಚೇತರಿಸಿಕೊಂಡ ನಂತರ ಮತ್ತೆ ಹೋಟೆಲ್ ತಲುಪಿದರು. ವೈದ್ಯಕೀಯ ತಂಡವು ಕಾಲಕಾಲಕ್ಕೆ ನಿಗಾ ವಹಿಸುತ್ತಿದೆ. ಅವರು ಶೀಘ್ರದಲ್ಲೇ ಮೈದಾನಕ್ಕೆ ಬರುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರು ಈಗಾಗಲೇ 70 ರಿಂದ 80 ರಷ್ಟು ಚೇತರಿಸಿಕೊಂಡಿದ್ದಾರೆ. ಆದರೆ, ಅವರು ಯಾವ ಪಂದ್ಯದಲ್ಲಿ ಆಡುತ್ತಾರೆ ಎಂದು ಹೇಳುವುದು ಕಷ್ಟ ಅಂತಾ ಮಾಹಿತಿ ನೀಡಿದರು.
ಗಿಲ್ ಅನುಪಸ್ಥಿತಿ ಹೊರತಾಗಿಯೂ ಭಾರತದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಪ್ರತಿಯೊಬ್ಬರಿಗೂ ಅವರ ಪಾತ್ರ ತಿಳಿದಿದೆ. ಮೈದಾನಕ್ಕಿಳಿದ ನಂತರ ಅವರು ಹೇಗೆ ಆಡಬೇಕು ಎಂಬ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡಿದ್ದೇವೆ. ಹಾಗಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಕೇವಲ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂದು ರಾಥೋಡ್ ಹೇಳಿದ್ದಾರೆ.
ಭಾರತ ಇಂದು ದೆಹಲಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್ 14 ರಂದು ಬಹುಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯಲಿದೆ. ಡೆಂಘೀ ಜ್ವರದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಗಿಲ್ ಪಾಕ್ ಜತೆಗಿನ ಪಂದ್ಯಕ್ಕೆ ತಯಾರಿ ನಡೆಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವೂ ವಿಶ್ಲೇಷಕರದ್ದು. ಇದರೊಂದಿಗೆ ಇಶಾನ್ ಕಿಶನ್ ಓಪನರ್ ಆಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಶುಭ್‌ಮನ್ ಗಿಲ್ ಕುರಿತು ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹೇಳಿಕೆ ನೀಡಿದ್ದು, ಗಿಲ್ ಅವರನ್ನು ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದ್ದರು. ಯುವ ಬಲಗೈ ಬ್ಯಾಟರ್ ಗಿಲ್ ವೈಟ್‌ಬಾಲ್ ಸ್ವರೂಪದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ, ತಂಡ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಓದಿ: ಸ್ಟಾರ್ ಆಟಗಾರ ಶುಭ್‌ಮನ್ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಪಾಕ್ ವಿರುದ್ಧ ಕಣಕ್ಕೆ ಅನುಮಾನ