ಇಂದು ಬಿಡುಗಡೆಯಾದ ಐಸಿಸಿ ಪುರುಷರ ಟಿ-20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ದ ನಡೆದ ಪಂದ್ಯಗಳಲ್ಲಿ ಒಂದು ರನ್ ಕೂಡಾ ಕಲೆ ಹಾಕದೇ ಇದ್ದರೂ ಸೂರ್ಯಕುಮಾರ್ ಐಸಿಸಿ ಪಟ್ಟಿಯಲ್ಲಿ 906 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಸ್ಥಿರವಾಗಿ ಉಳಿದಿದ್ದಾರೆ. 798 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಾಕಿಸ್ತಾನ ತಂಡ ಮೊಹಮ್ಮದ್ ರಿಜ್ವಾನ್ ಇದ್ದಾರೆ.
ಅಗ್ರ 10 ಬ್ಯಾಟರ್‌ಗಳ ಪೈಕಿ ಸೂರ್ಯಕುಮಾರ್ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ. 2022ರಲ್ಲಿ ಚುಟುಕು ಕ್ರಿಕೆಟ್ನಲ್ಲಿ ಹೊಸ ದಾಖಲೆಗಳೊಂದಿಗೆ ಆ ವರ್ಷವನ್ನು ತನ್ನ ಕ್ರಿಕೆಟ್ ಜೀವನದಲ್ಲೇ ಅವಿಸ್ಮರಣೀಯ ಗೊಳಿಸಿದ್ದರು. 2023ರ ಆರಂಭದಲ್ಲಿ ತವರಿನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸೂರ್ಯ ಉತ್ತಮ ಆಟ ಪ್ರದರ್ಶಿಸಿದ್ದರು. ರನ್ ಮಷಿನ್ ಎಂದೇ ಕರೆಯುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 612 ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದಾರೆ
ಬೌಲರ್‌ಗಳ ಪೈಕಿ, ಅಫ್ಘಾನಿಸ್ತಾನದ ರಶೀದ್ ಖಾನ್ 710 ಅಂಕಗಳನ್ನು ಗಳಿಸಿ ನಂಬರ್ ಒನ್ ಟಿ-ಟ್ವೆಂಟಿ ಬೌಲರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಮತ್ತೊಬ್ಬ ಅಫ್ಘಾನಿಸ್ತಾನಿ ವೇಗಿ ಫಜಲ್ಹಕ್ ಫಾರೂಕಿ 692 ಅಂಕಗಳೊಂದಿಗೆ ಭದ್ರವಾಗಿದ್ದಾರೆ. ಭಾರತ ತಂಡದ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ 14 ನೇ ಸ್ಥಾನದಲ್ಲಿದ್ದಾರೆ. ಅನುಭವಿ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ 19ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವರ್ಷ ಭಾರತ ಕ್ರಿಕೆಟ್ ತಂಡದ ಯಾವೊಬ್ಬ ಬೌಲರ್ ಕೂಡ ಅಗ್ರ 10ರಲ್ಲಿ ಕಾಣಿಸಿಕೊಂಡಿಲ್ಲ.
ಹ್ಯಾರಿಸ್ ರೌಫ್ ಮತ್ತು ಶಾದಾಬ್ ಖಾನ್ ಪಾಕಿಸ್ತಾನದ ಅಗ್ರ ಶ್ರೇಯಾಂಕದ ಬೌಲರ್‌ಗಳಾಗಿದ್ದು, ರೌಫ್ ಈಗಾಗಲೇ ನಡೆಯುತ್ತಿರುವ ಟಿ-ಟ್ವೆಂಟಿ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಪಡೆದು ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ 269 ಅಂಕಗಳೊಂದಿದೆ ಮೊದಲ ಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ 250 ಅಂಕಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 230 ಅಂಕ, ಪಾಕ್ ಆಟಗಾರ ಶಾದಾಬ್ ಖಾನ್ ಇದ್ದಾರೆ.
ಇದನ್ನೂ ಓದಿ: ಹರ್ಮನ್ಪ್ರೀತ್ ಕೌರ್, ಸೂರ್ಯ ಕುಮಾರ್ ಯಾದವ್ಗೆ ವಿಸ್ಡನ್ ಗೌರವ