ದುಬೈ: ಭಾರತ ತಂಡದ ಆಲ್ರೌಂಡರ್ ಹರ್ಮನ್ ಪ್ರೀತ್ ಕೌರ್ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 20ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನಾಯಕಿ ಮಿಥಾಲಿ ರಾಜ್ 2 ಮತ್ತು ಮಂಧಾನ ತಮ್ಮ 8ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 63 ಎಸೆತಗಳಲ್ಲಿ 66 ರನ್ಗಳಿಸಿ ಫಾರ್ಮ್ಗೆ ಮರಳಿದ್ದ ಕೌರ್ ಭಾರತ ತಂಡ ವೈಟ್ವಾಷ್ ಅಪಮಾನಕ್ಕೆ ಒಳಗಾಗುವುದನ್ನು ತಪ್ಪಿಸಿದ್ದರು.
ಇನ್ನು ಅದೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ನಾಯಕಿ ಮಿಥಾಲಿ ರಾಜ್ ಮತ್ತು 73 ರನ್ಗಳಿಸಿದ್ದ ಆರಂಭಿಕ ಬ್ಯಾಟಿಂಗ್ ಮಂಧಾನ ಕ್ರಮವಾಗಿ 2 ಮತ್ತು 8ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಆಲ್ರೌಂಡರ್ ದೀಪ್ತಿ ಶರ್ಮಾ ಕೂಡ ಬೌಲಿಂಗ್ ವಿಭಾಗದಲ್ಲಿ ಒಂದು ಸ್ಥಾನ ಏರಿಕೆ ಕಂಡು 12ರಲ್ಲಿದ್ದಾರೆ. ಅವರು 4 ಮತ್ತು 5ನೇ ಏಕದಿನ ಪಂದ್ಯದಲ್ಲಿ 49ಕ್ಕೆ1, 42ಕ್ಕೆ 2 ವಿಕೆಟ್ ಪಡೆದಿದ್ದರು. ಆದರೆ ಬ್ಯಾಟಿಂಗ್ ವಿಫಲರಾದ ಕಾರಣ ಆಲ್ರೌಂಡರ್ ಶ್ರೇಯಾಂಕದಲ್ಲಿ 4 ರಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ಅಗ್ರ 10ರಲ್ಲಿರುವ ಏಕೈಕ ಭಾರತೀಯರಾಗಿದ್ದು, ಅವರು 4 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಭಾರತದ ವಿರುದ್ಧ ಕೊನೆಯ 2 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ ತಲಾ 68 ರನ್ಗಳಿಸಿದ್ದ ಕಿವೀಸ್ನ 20 ವರ್ಷದ ಅಮೆಲಿಯಾ ಕೆರ್ 5 ಸ್ಥಾನ ಮೇಲೇರಿ 17ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲೂ ಅವರು 17ನೇ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಅಲಿಸಾ ಹೀಲಿ, ಜೆಸ್ ಜೊನಾಸೆನ್ ಮತ್ತು ಎಲಿಸ್ ಪೆರ್ರಿ ಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್ರೌಂಡರ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಮಹಿಳಾ ವಿಶ್ವಕಪ್ : 11 ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟಕೇರಿದ್ದು ಮೂರೇ ತಂಡಗಳು!!