ನವದೆಹಲಿ: ಬಿಡುಬೀಸಾದ ಬ್ಯಾಟಿಂಗ್ ಮಾಡುತ್ತಿರುವ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಈಗ ಎಲ್ಲರ ನೆಚ್ಚಿನ ಕ್ರಿಕೆಟಿಗ. ಆಸೀಸ್ ವಿರುದ್ಧದ ಮೊದಲ ಟಿ20ಯಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟ್ ನೀಡಿ 30 ಎಸೆತಗಳಲ್ಲಿ 71 ರನ್ ಮಾಡಿರುವುದಕ್ಕೆ ಹಲವು ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಕೂಡ ಪಾಂಡ್ಯಾರನ್ನು ಹೊಗಳಿದ್ದು, ಆತನೊಬ್ಬ ಅನ್ಯಗ್ರಹದ ವ್ಯಕ್ತಿಯಂತೆ ಆಟವಾಡುತ್ತಿದ್ದಾನೆ ಎಂದು ಬಣ್ಣಿಸಿದ್ದಾರೆ.
ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯಾ ಭಾರತದ ಆಸ್ತಿಯಾಗಿದ್ದಾರೆ. ಏಷ್ಯಾ ಕಪ್ನಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಹಾರ್ದಿಕ್ 40, 50, 60 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅನ್ಯಗ್ರಹದಿಂದ ಬಂದಂತೆ ಅವರು ಬ್ಯಾಟ್ ಬೀಸುತ್ತಿದ್ದಾರೆ ಎಂದು ಹೊಗಳಿದ್ದಾರೆ.
ಹಾರ್ದಿಕ್ ಪಾಂಡ್ಯಾ ಸ್ಟ್ರೈಕ್ರೇಟ್ ಅತ್ಯದ್ಭುತವಾಗಿದೆ. 152.85 ರ ರನ್ ದರದಲ್ಲಿ ಅವರು ಬ್ಯಾಟ್ ಬೀಸಿದ್ದಾರೆ. 17 ಪಂದ್ಯಗಳಲ್ಲಿ 152.85 ರ ಸ್ಟ್ರೈಕ್ರೇಟ್ನಲ್ಲಿ 402 ರನ್‌ಗಳನ್ನು ಗಳಿಸಿದ್ದಾರೆ. ಭಾರತ ತಂಡದ 5ನೇ ಕ್ರಮಾಂಕದಲ್ಲಿ ಪಾಂಡ್ಯಾ ಮಿಂಚುತ್ತಿರುವುದು ವಿಶ್ವಕಪ್ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಪಾಂಡ್ಯಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುತ್ತಿರುವುದು ಗಮನಾರ್ಹ. ಇದು ತಂಡದ ಹೊರೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಎರಡರಲ್ಲೂ ಪಾಂಡ್ಯಾ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಹಾರ್ದಿಕ್ಗೆ ಹ್ಯಾಟ್ಸ್ಆಫ್ ಎಂದರು.
ಯಜುವೇಂದ್ರ ಚಹಲ್ಗೆ ವಿಶ್ರಾಂತಿ ನೀಡಿ: ಸ್ಪಿನ್ನರ್ ಯಜುವೆಂದ್ರ ಚಹಲ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಮಂಜ್ರೇಕರ್, ಸತತ ಪಂದ್ಯಗಳಿಂದ ಅವರು ಬಳಲಿದಂತೆ ಕಾಣುತ್ತಿದ್ದಾರೆ. ಅವರಿಗೆ ಕೆಲ ಪಂದ್ಯಗಳವರೆಗೆ ವಿಶ್ರಾಂತಿ ನೀಡಬೇಕು. ಆಗ ವಿಶ್ವಕಪ್ ಪಂದ್ಯಗಳಲ್ಲಿ ಅವರು ಮಿಂಚಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಓದಿ: ತವರು ಮೈದಾನದಲ್ಲಿ ಐಪಿಎಲ್ ಅಬ್ಬರ.. ಹಳೆಯ ಸ್ವರೂಪದಲ್ಲಿ 2023 ರ ಆವೃತ್ತಿ: ಬಿಸಿಸಿಐ