ಲಂಡನ್: ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಮೆರಿಲ್ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ)ನಿಂದ ಅಜೀವ ಸದಸ್ಯತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳವಾರ ಕ್ಲಬ್ ಒಟ್ಟು 16 ವಿವಿಧ ದೇಶಗಳ ಕ್ರಿಕೆಟಿಗರು ಈ ವರ್ಷ ಅಜೀವ ಸದಸ್ಯತ್ವ ಪಡೆದಿದ್ದಾರೆ.
ಎಂಸಿಸಿ ಕ್ರಿಕೆಟ್ ಆಟದ ಕಾನೂನುಗಳನ್ನು ರೂಪಿಸುವ ಲಾರ್ಡ್ಸ್ ಮೂಲದ ಪುರಾತನ ಕ್ಲಬ್ ಆಗಿದೆ. ಕ್ರಿಕೆಟ್ನಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಆಟಗಾರರಿಗೆ ಪ್ರತಿ ವರ್ಷ ಕ್ಲಬ್ ಸದಸ್ಯತ್ವವನ್ನು ನೀಡುತ್ತದೆ. ಈ ಬಾರಿ 16 ಆಟಗಾರರಿಗೆ ನೀಡಿದೆ.
ಹರ್ಭಜನ್ ಸಿಂಗ್ ಮತ್ತು ಶ್ರೀನಾಥ್ ಭಾರತ ಪರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ದಶಕಕ್ಕೂ ಹೆಚ್ಚ ಕಾಲ ಆನಂದಿಸಿದ್ದಾರೆ. ಭಜ್ಜಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ 3ನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಒಟ್ಟು 700ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.
ಶ್ರೀನಾಥ್ ಭಾರತ ಕಂಡ ಶ್ರೇಷ್ಠ ವೇಗದ ಬೌಲರ್ ಆಗಿದ್ದು, ಅವರು 315 ಏಕದಿನ ವಿಕೆಟ್ ಮತ್ತು ಟೆಸ್ಟ್ನಲ್ಲಿ 236 ವಿಕೆಟ್ ಪಡೆದಿದ್ದಾರೆ. ಅವರೂ ಪ್ರಸ್ತುತ ಐಸಿಸಿ ಪ್ಯಾನಲ್ನಲ್ಲಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಜೊತೆಗೆ ಇಂಗ್ಲೆಂಡ್ನ ಅಲಿಸ್ಟೈರ್ ಕುಕ್, ಇಯಾನ್ ಬೆಲ್, ಮಾರ್ಕಸ್ ಟ್ರೆಸ್ಕೋತಿಕ್ ಹಾಗೂ ಮಹಿಳಾ ತಂಡದ ಸ್ಟಾರ್ ವಿಕೆಟ್ ಕೀಪರ್ ಸಾರಾ ಟೇಲರ್ ಎಂಸಿಸಿ ಸೇರಿದ್ದಾರೆ.
ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ಹಾಸಿಮ್ ಆಮ್ಲ, ಹರ್ಷೆಲ್ ಗಿಬ್ಸ್, ಮತ್ತು ಮಾರ್ನ್ ಮಾರ್ಕೆಲ್, ಆಸ್ಟ್ರೇಲಿಯಾ ಡೆಮಿನ್ ಮಾರ್ಟಿನ್ ಹಾಗೂ ಮಹಿಳಾ ಬ್ಯಾಟರ್ ಅಲೆಕ್ಸ್ ಬ್ಲಾಕ್ವೆಲ್, ವೆಸ್ಟ್ ಇಂಡೀಸ್ನ ರಾಮನರೇಸ್ ಸರವಣ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಇಯಾನ್ ಬಿಷಪ್, ಶ್ರೀಲಂಕಾದ ರಂಗನಾ ಹೆರಾತ್, ನ್ಯೂಜಿಲ್ಯಾಂಡ್ನ ಸಾರಾ ಮೆಗ್ಲಾಶನ್ ಹಾಗೂ ಜಿಂಬಾಬ್ವೆಯ ಗ್ರ್ಯಾಂಟ್ ಫ್ಲವರ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
"ಒಮ್ಮೆ MCC ಸಮಿತಿಯಿಂದ ಅನುಮೋದನೆ ಪಡೆದ ನಂತರ, ಆಮಂತ್ರಣ ಪತ್ರಗಳನ್ನು ಸ್ವೀಕರಿಸಲು ಸದಸ್ಯತ್ವಕ್ಕೆ ಆಯ್ಕೆಯಾದ ವ್ಯಕ್ತಿಗಳಿಗೆ ಕಳುಹಿಸಲಾಗುತ್ತದೆ. ಅವರು ಯಾವುದೇ ಸಮಯದಲ್ಲಿ ಗೌರವವನ್ನು ಸ್ವೀಕರಿಸಬಹುದು " ಎಂದು ಕ್ಲಬ್ನ ಹೇಳಿಕೆಯಲ್ಲಿ ಸೇರಿಸಲಾಗಿದೆ.