ಬ್ರಿಸ್ಟಲ್ : ಶ್ರೀಲಂಕಾ- ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ವೀಕ್ಷಕ ವಿವರಣೆ ನಿಡುವಾಗ ತಾನು ಆಡಿದ ಸೆಕ್ಸಿಸ್ಟ್ ಮಾತಿಗೆ ಟೀಂ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಆರಂಭಕ್ಕೂ ಮೊದಲು ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಕಾಮೆಂಟರಿ ನೀಡುವ ಅವಕಾಶವನ್ನು ದಿನೇಶ್ ಪಡೆದಿದ್ದರು. ವೀಕ್ಷಕ ವಿವರಣೆ ನೀಡುವ ವೇಳೆ ಕ್ರಿಕೆಟ್ ಬ್ಯಾಟ್ ಅನ್ನು 'ಪಕ್ಕದ ಮನೆಯವನ ಹೆಂಡತಿ'ಗೆ ಹೋಲಿಸಿ ದಿನೇಶ್ ಎಡವಟ್ಟು ಮಾಡಿಕೊಂಡಿದ್ದರು.
"ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟ್ ಅನ್ನು ಇಷ್ಟಪಡುವುದಿಲ್ಲ. ಹಾಗಾಗಿ, ಅದು ಒಬ್ಬರಿಂದ ಒಬ್ಬರ ಕೈ ಸೇರುತ್ತದೆ. ಹೆಚ್ಚಿನ ಬ್ಯಾಟ್ಸ್ಮನ್ಗಳು ಇನ್ನೊಬ್ಬರ ಬ್ಯಾಟ್ಗೆ ಆಸೆ ಪಡುತ್ತಾರೆ. ಹಾಗಾಗಿ, ಬ್ಯಾಟ್ ಒಂಥರಾ ಪಕ್ಕದ ಮನೆಯವನ ಹೆಂಡತಿ ಇದ್ದಹಾಗೆ. ಅವರೇ ಹೆಚ್ಚು ಇಷ್ಟವಾಗುವುದು" ಎಂದು ದಿನೇಶ್ ಕಾರ್ತಿಕ್ ಕ್ರಿಕೆಟ್ ಕಾಮೆಂಟರಿ ವೇಳೆ ಹೇಳಿದ್ದರು.
ಜನರನ್ನು ರಂಜಿಸಲು ಕಾರ್ತಿಕ್ ಆಡಿದ ಈ ಮಾತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಕಾರ್ತಿಕ್ ಶ್ರೀಲಂಕಾ- ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಲೈವ್ನಲ್ಲೇ ಕ್ಷಮೆ ಯಾಚಿಸಿದ್ದಾರೆ.
ಓದಿ : ಕರುಣ್ ನಾಯರ್ ಒಂದೆರಡು ಪಂದ್ಯದಲ್ಲಿ ವಿಫಲರಾಗಿದ್ದಕ್ಕೆ ಸೈಡ್ಲೈನ್ ಮಾಡಲಾಯ್ತು: ಸಂಜಯ್ ಬಂಗಾರ್
"ಕೊನೆಯ ಪಂದ್ಯದ ವೇಳೆ ಏನು ನಡೆಯಿತೋ ಆ ಬಗ್ಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಆ ರೀತಿ ಹೇಳಿಲ್ಲ. ನನ್ನ ಮಾತು ತಪ್ಪಾಗಿದ್ದರೆ, ನಾನು ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ. ಆಡಿದ ಮಾತಿಗೆ ಅಮ್ಮ ಮತ್ತು ಪತ್ನಿಯಿಂದಲೂ ಬೈಗುಳ ತಿಂದಿದ್ದೇನೆ'' ಎಂದು ಕಾರ್ತಿಕ್ ಹೇಳಿದ್ದಾರೆ.