ಸೌತಾಂಪ್ಟನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(WTC) ಫೈನಲ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದೆ. ಎರಡನೇ ದಿನದ ಅಂತ್ಯದ ವೇಳೆಗೆ(ನಿನ್ನೆ) ಕೊಹ್ಲಿ ಟೀಂ 3 ವಿಕೆಟ್ ಕಳೆದುಕೊಂಡು 146 ರನ್ಗಳಿಸಿತು.
ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಕಠಿಣ ಪಿಚ್ನಲ್ಲೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 62ರನ್ಗಳ ಕಾಣಿಕೆ ನೀಡಿತು. ಅದರಲ್ಲೂ ಯಂಗ್ ಬಾಯ್ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಸದೃಢರಾಗಿ ಕಾಣುತ್ತಿದ್ದರು. ಗಿಲ್ ದೊಡ್ಡ ಇನ್ನಿಂಗ್ಸ್ ಭರವಸೆಯ ಆರಂಭ ಪಡೆದರಾದರೂ, ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ಮೂರು ಭರ್ಜರಿ ಬೌಂಡರಿ ಸಮೇತ ಕೇವಲ 28 ರನ್ಗಳಿಸಿ ನೀಲ್ ವ್ಯಾಗ್ನರ್ಗೆ ಗಿಲ್ ವಿಕೆಟ್ ಒಪ್ಪಿಸಿದರು.
ಶುಬ್ಮನ್ ಗಿಲ್ ಬಗ್ಗೆ ಇದೀಗ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಮಾತನಾಡಿದ್ದಾರೆ. ಶುಬ್ಮನ್ ಗಿಲ್ ಭಾರತ ಪರ ಅನೇಕ ಶತಕಗಳನ್ನು ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. ಗಿಲ್ ಆಡಿದ ಕೇವಲ 7 ಪಂದ್ಯದಲ್ಲಿ ಮೂರು ಅರ್ಧಶತಕ ಸಿಡಿಸಿದ್ದಾರೆ. ಅದರಲ್ಲೂ ಅವರು ಈ ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 91 ರನ್ ಗಳಿಸಿದ್ದು ಇವರ ಶ್ರೇಷ್ಠ ಸಾಧನೆಯಾಗಿದೆ.
"ಮೊದಲ ನೂರು ಯಾವಾಗಲೂ ಕಠಿಣವಾಗಿರುತ್ತದೆ. ಏಕೆಂದರೆ ಅರ್ಧಶತಕವನ್ನು ಗಳಿಸುವುದರಿಂದ ಮೂರು ಅಂಕಿಗಳನ್ನು ತಲುಪುವ ಪ್ರಯಾಣ ಅಷ್ಟು ಸುಲಭವಲ್ಲ. ಬ್ಯಾಟ್ಸ್‌ಮನ್‌ಗಳು 70-80 ರನ್‌ಗಳಿಸಿದಾಗ ಒತ್ತಡ ಪ್ರಾರಂಭವಾಗುತ್ತದೆ. ಅದಕ್ಕೆ ತಕ್ಕ ಹಾಗೆ ಬೌಲರ್ಗಳೂ ಒತ್ತಡ ಹೇರುತ್ತಿರುತ್ತಾರೆ. ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪರಿಶ್ರಮವಹಿಸಿ ಗಿಲ್ ತಮ್ಮ ಮೊದಲ ಶತಕ ದಾಖಲಿಸಬೇಕಾಗಿದೆ."
-ಸುನೀಲ್ ಗವಾಸ್ಕರ್, ಭಾರತದ ಕ್ರಿಕೆಟ್ ದಂತಕಥೆ