ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡುತ್ತಿದ್ದಂತೆ ಅನೇಕ ಪರ-ವಿರೋಧ ಮಾತುಗಳು ಕೇಳಿ ಬರಲು ಶುರುವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು, ವಿರಾಟ್ ವಿರುದ್ಧ ಚಾಟಿ ಬೀಸಿದ್ದಾರೆ.
ಟೀಂ ಇಂಡಿಯಾ ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ. ನಾಯಕತ್ವ ಇದ್ದರೂ, ಇಲ್ಲದಿದ್ದರೂ ಆಟಗಾರ ಕೂಡ ತಂಡಕ್ಕಾಗಿ ಆಡಬೇಕು. ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಆಡಿಲ್ವಾ?, ಅದರಲ್ಲಿ ಅಂತಹ ಯಾವುದೇ ವಿಶೇಷತೆ ಇಲ್ಲ ಎಂದರು.
ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಗಂಭೀರ್, ಈ ಹಿಂದೆ ಧೋನಿ ತಂಡಕ್ಕಾಗಿ ಮೂರು ಐಸಿಸಿ ಟ್ರೋಫಿ ಹಾಗೂ ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಕೂಡ ವಿರಾಟ್ ಕೊಹ್ಲಿ ನಾಯಕತ್ವದಡಿ ಆಡಿದ್ದಾರೆ. ಇದೀಗ ವಿರಾಟ್ ರಾಜೀನಾಮೆ ನೀಡಿದ್ದು, ಬೇರೆ ಪ್ಲೇಯರ್ ಆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಟೀಂ ಇಂಡಿಯಾ ಟೆಸ್ಟ್ ನಾಯಕನಾದರೆ ದೊಡ್ಡ ಜವಾಬ್ದಾರಿ, ಗೌರವ:ಕೆ.ಎಲ್.ರಾಹುಲ್
ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಇದೀಗ ರನ್ಗಳಿಕೆ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದಿರುವ ಗಂಭೀರ್, ನಾಯಕನಾದ ಬಳಿಕ ಅಥವಾ ನಾಯಕ ಸ್ಥಾನದಿಂದ ಯಾವುದೇ ರೀತಿಯ ಹೆಚ್ಚಿನ ಬದಲಾವಣೆ ಕಂಡುಬರಲ್ಲ. ಒಂದೇ ಒಂದು ವ್ಯತ್ಯಾಸವೆಂದರೆ ನೀವು ಟಾಸ್ ಮಾಡಲು ಮೈದಾನಕ್ಕೆ ಹೋಗುವುದಿಲ್ಲ ಅಷ್ಟೇ ಎಂದರು.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೊಹ್ಲಿ ಪಾತ್ರದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಅವರ ನಾಯಕತ್ವದ ವೇಳೆ ನಿರ್ವಹಿಸುತ್ತಿದ್ದ ಕೆಲಸವನ್ನೇ ಈಗಲೂ ಮಾಡುತ್ತಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು, ಇದೀಗ ಹೆಚ್ಚಿನ ರನ್ಗಳಿಕೆ ಮಾಡುವುದರ ಕಡೆ ಗಮನಹರಿಸಲಿ. ವಿರಾಟ್ ಈ ಹಿಂದೆ ಕೂಡ ಭಾರತಕ್ಕೆ ಆಡಿದ್ದಾರೆ, ಈಗಲೂ ಭಾರತಕ್ಕಾಗಿ ಆಡಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.