ಮುಂಬೈ: ಕೋಟಿಗಟ್ಟಲೇ ಹಣ ಪಡೆದರೂ ಅದಕ್ಕೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವ ಕೆಲವು ಆಟಗಾರರನ್ನು ವಿವಿಧ ಫ್ರಾಂಚೈಸಿಗಳು 2022ರ ಆವೃತ್ತಿಯಲ್ಲಿ ತಂಡದಿಂದ ಕೈಬಿಡಲಿದ್ದಾರೆ. ಕೇವಲ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶ ಇರುವುದರಿಂದ ಪರ್ಸ್ ಉಳಿಸಿಕೊಳ್ಳಲು ಈ ದುಬಾರಿ ಆಟಗಾರರಿಗೆ ಗೇಟ್ ಪಾಸ್ ನೀಡುವುದು ಅನಿವಾರ್ಯವಾಗಿದೆ.
ಕ್ರಿಸ್ ಮೋರಿಸ್: ಫೆಬ್ರವರಿಯಲ್ಲಿ 14ನೇ ಆವೃತ್ತಿಗೂ ಮುನ್ನ ನಡೆದಿದ್ದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರನ್ನು ಬರೋಬ್ಬರಿ 16.25 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, 11 ಪಂದ್ಯಗಳಿಂದ 15 ವಿಕೆಟ್ ಪಡೆದರೂ 9.17ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಇವರನ್ನು ರಾಯಲ್ಸ್ ಕೈಬಿಡಲಿದೆ.
ಪ್ಯಾಟ್ ಕಮ್ಮಿನ್ಸ್: 2020ರ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 15.5 ಕೋಟಿ ರೂ. ಪಡೆದಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆದರೂ 2021 ಆವೃತ್ತಿಯಲ್ಲೂ ಕೆಕೆಆರ್ ಅವರನ್ನು ಉಳಿಸಿಕೊಂಡಿತ್ತು. 2021ರಲ್ಲಿ ಅವರು 7 ಪಂದ್ಯಗಳಿಂದ 8.8ರ ಎಕಾನಮಿಯಲ್ಲಿ 9 ವಿಕೆಟ್ ಪಡೆದಿದ್ದರು. 2020ರಲ್ಲೂ 14 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದರು.
ಕೈಲ್ ಜೇಮಿಸನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಿಂದ ಬರೋಬ್ಬರಿ 15 ಕೋಟಿ ರೂ. ಪಡೆದಿದ್ದ ನ್ಯೂಜಿಲ್ಯಾಂಡ್ನ ಕೈಲ್ ಜೇಮಿಸನ್ ಆಡಿದ 9 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದರು. ಆದರೆ, ಇವರೂ ಕೂಡ 9.6ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.
ಜೇ ರಿಚರ್ಡ್ಸನ್: ಆಸ್ಟ್ರೇಲಿಯಾದ ಯುವ ಬೌಲರ್‌ರನ್ನು ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 14 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಕೇವಲ 3 ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದಿದ್ದರು. 3 ವಿಕೆಟ್ ಪಡೆದಿದ್ದ ಇವರು 10.64ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.
ಬೆನ್ ಸ್ಟೋಕ್ಸ್: 2018ರಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಇಂಗ್ಲೆಂಡ್ ಆಲ್ರೌಂಡರ್ ಬೆರೋಬ್ಬರಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ, ತಾವು ಪಡೆದ ದುಡ್ಡಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ. 2022ಕ್ಕೆ ರಾಯಲ್ಸ್ ಇವರನ್ನು ಮೋರಿಸ್ ಜೊತೆಗೆ ತಂಡದಿಂದ ಕೈಬಿಡಲು ನಿರ್ಧರಿಸಿದೆ.
ಕೃಷ್ಣಪ್ಪ ಗೌತಮ್: ಕರ್ನಾಟಕದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ರನ್ನು ಬರೋಬ್ಬರಿ 9.25 ಕೋಟಿ ರೂ. ನೀಡಿ ಖರೀದಿಸಿದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎರಡೂ ಹಂತಗಳಲ್ಲಿ ಒಮ್ಮೆಯೂ ಅವರನ್ನು ಆಡುವ 14ರ ಬಳಗದಲ್ಲಿ ಅವಕಾಶ ನೀಡಲಿಲ್ಲ. ಕೇವಲ ಬದಲೀ ಫೀಲ್ಡರ್ ಆಗಿ ಮಾತ್ರ ಬಳಸಿಕೊಂಡಿತು.
ಇವರಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ನ ಸುರೇಶ್ ರೈನಾ(13.5 ಕೋಟಿ) ಪಂಜಾಬ್ ಕಿಂಗ್ಸ್ನ ರಿಲೆ ಮೆರಿಡಿತ್(8 ಕೋಟಿ), ಟಾಮ್ ಕರ್ರನ್(5.25) ಕೂಡ ತಮ್ಮ ರಿಟೈನ್ ಲಿಸ್ಟ್ನಿಂದ ಹೊರ ಬರಲಿದ್ದಾರೆ. ಅಲ್ಲದೆ ಈ ಆಟಗಾರರ ಗರಿಷ್ಠ ಬೆಲೆ ಪಡೆದವರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿ ನೀಡಿ ಖರೀದಿಸಿರುವ ಮ್ಯಾಕ್ಸ್ವೆಲ್ ಮಾತ್ರ ತಮ್ಮ ಫ್ರಾಂಚೈಸಿಯಲ್ಲಿಯೇ ಉಳಿದುಕೊಂಡಿದ್ದಾರೆ. ಅವರನ್ನು ಬಿಟ್ಟರೆ ಮೊಯೀನ್ ಅಲಿ(7 ಕೋಟಿ) ಮಾತ್ರ ತಮ್ಮ ಫ್ರಾಂಚೈಸಿಯಲ್ಲಿ ಅವಕಾಶ ಪಡೆದಿದ್ದಾರೆ.
ಇದನ್ನು ಓದಿ:IPL Retention : ಮ್ಯಾಕ್ಸ್ವೆಲ್, ಕೊಹ್ಲಿ ನಂತರ ಸಿರಾಜ್ರನ್ನು ಉಳಿಸಿಕೊಳ್ಳಲು RCB ನಿರ್ಧಾರ