ಅಹಮದಾಬಾದ್: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಕೆಲವು ನಗರಗಳಲ್ಲಿ ಲಾಕ್ಡೌನ್ ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಇದರ ಬೆನ್ನಲ್ಲೇ ಗುಜರಾತ್ ಕ್ರಿಕೆಟ್ ಅಸೋಷಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಮೂರು ಟಿ 20 ಪಂದ್ಯಗಳಿಗೆ ಟಿಕೆಟ್ ದರವನ್ನು ಮರುಪಾವತಿಸುವುದಾಗಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಸೋಮವಾರ ತಿಳಿಸಿದೆ.
ಭಾರತ-ಇಂಗ್ಲೆಂಡ್ ನಡುವಿನ ಮುಂದಿನ ಮೂರು ಟಿ-20 ಪಂದ್ಯಗಳ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಜತೆಗೆ ಟಿಕೆಟ್ ಖರೀದಿ ಮಾಡಿರುವ ವ್ಯಕ್ತಿಗಳಿಗೆ ಹಣ ಮರುಪಾವತಿ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಓದಿ : ಭಾರತ-ಇಂಗ್ಲೆಂಡ್ ಮುಂದಿನ ಟಿ-20 ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗಿಲ್ಲ ಅವಕಾಶ
ನಾಳೆ ಉಭಯ ತಂಡಗಳ ನಡುವೆ ಭಾರತ-ಇಂಗ್ಲೆಂಡ್ ನಡುವೆ ಮೂರನೇ ಟಿ-20 ಪಂದ್ಯ ನಡೆಯಲಿದ್ದು, ಇದಕ್ಕೂ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಉಭಯ ತಂಡಗಳ ನಡುವೆ ಐದು ಟಿ-20 ಪಂದ್ಯಗಳ ಸರಣಿ ನಡೆಯಲಿದ್ದು, ಈಗಾಗಲೇ ಮುಕ್ತಾಯಗೊಂಡಿರುವ ಎರಡು ಟಿ-20 ಪಂದ್ಯಗಳಲ್ಲಿ ಉಭಯ ತಂಡ 1-1 ಪಂದ್ಯಗಳಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಂಡಿವೆ.
ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ವೀಕ್ಷಣೆ ಮಾಡಲು 67,532 ಜನರು ಹಾಗೂ ಎರಡನೇ ಟಿ-20 ಪಂದ್ಯ ವೀಕ್ಷಣೆಗೆ 66 ಸಾವಿರ ಜನರು ಆಗಮಿಸಿದ್ದರು.