ಸೌತಾಂಪ್ಟನ್ : ರನ್ ಮಷಿನ್ ಖ್ಯಾತಿಯ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಪುಡಿಗಟ್ಟುವ ಮೂಲಕ ವಿಶ್ವದಲ್ಲಿ ಪ್ರಸ್ತುತ ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ರ ಎಲ್ಲಾ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಿದ್ದ ಕೊಹ್ಲಿ ಲೆಜೆಂಡರಿ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ರನ್ನು ಹಿಂದಿಕ್ಕುವುದರಲ್ಲಿ ವಿಫಲರಾಗಿದ್ದಾರೆ.
ಪ್ರಸ್ತುತ WTC ಫೈನಲ್ ಸೇರಿ ವಿರಾಟ್ ಕೊಹ್ಲಿ 154 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇಷ್ಟೇ ಇನ್ನಿಂಗ್ಸ್ಗಳಲ್ಲಿ ಸುನೀಲ್ ಗವಾಸ್ಕರ್ ಅವರ ದಾಖಲೆಯೊಂದಿಗೆ ಹೋಲಿಸಿದಾಗ ವಿರಾಟ್ ಸ್ವಲ್ಪ ಹಿನ್ನಡೆ ಸಾಧಿಸಿದ್ದಾರೆ.
ಗವಾಸ್ಕರ್ 154 ಇನ್ನಿಂಗ್ಸ್ಗಳಲ್ಲಿ 53.42 ಸರಾಸರಿಯಲ್ಲಿ 7585 ರನ್ಗಳಿಸಿದ್ದಾರೆ. ಇಷ್ಟೇ ಇನ್ನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 52.31ರ ಸರಾಸರಿಯಲ್ಲಿ 7534 ರನ್ ಸಿಡಿಸಿದ್ದಾರೆ. ಗವಾಸ್ಕರ್ 27 ಶತಕ ಮತ್ತು 33 ಅರ್ಧಶತಕ ದಾಖಲಿಸಿದ್ದರೆ, ಕೊಹ್ಲಿ 27 ಶತಕ ಮತ್ತು 25 ಅರ್ಧಶತಕ ಸಿಡಿಸಿದ್ದಾರೆ.
ಸುನೀಲ್ ಗವಾಸ್ಕರ್ ವಿರಾಟ್ ಕೊಹ್ಲಿಗಿಂತ 1000 ದಿಂದ 6000 ರನ್ಗಳ ಮೈಲುಗಲ್ಲನ್ನು ಕಡಿಮೆ ಇನ್ನಿಂಗ್ಸ್ನಲ್ಲಿ ಪೂರೈಸಿದ್ದಾರೆ. ಆದರೆ, 7000 ರನ್ಗಳ ಮೈಲುಗಲ್ಲು ತಲುಪಲು ಗವಾಸ್ಕರ್ 140 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ 138 ಇನ್ನಿಂಗ್ಸ್ಗಳಲ್ಲಿ ತಲುಪಿದ್ದಾರೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 10 ವರ್ಷ ಪೂರೈಸಿದ ಕಿಂಗ್ ಕೊಹ್ಲಿ: ಇಲ್ಲಿದೆ ದಶಕದ ಸಾಧನೆ..