ಮುಂಬೈ: ಪ್ಲೇ ಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕುಲ್ದೀಪ್ ಯಾದವ್ ಸ್ಪಿನ್ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 147 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಎರಡೂ ತಂಡಗಳಿಗೂ ಗೆಲುವು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ 35 ರನ್ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆ್ಯರೋನ್ ಫಿಂಚ್(3), ವೆಂಕಟೇಶ್ ಅಯ್ಯರ್(6), ಬಾಬಾ ಇಂದ್ರಜಿತ್(6) ಮತ್ತು ಸುನಿಲ್ ನರೈನ್(0) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ, 5ನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ 48 ರನ್ಗಳ ಜೊತೆಯಾಟ ನಡೆಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. 37 ಎಸೆತಗಳಲ್ಲಿ 42 ರನ್ಗಳಿಸಿದ್ದ ಅಯ್ಯರ್, ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ಪಂತ್ ಅದ್ಭುತ ಕ್ಯಾಚ್ಗೆ ಬಲಿಯಾದರು. ಶ್ರೇಯಸ್ ಬೆನ್ನಲ್ಲೇ ಬ್ಯಾಟಿಂಗ್ಗೆ ಬಂದ ವಿಧ್ವಂಸಕ ಬ್ಯಾಟರ್ ರಸೆಲ್ ಅದೇ ಓವರ್ನ ನಂತರದ ಎಸೆತದಲ್ಲೇ ಸ್ಟಂಪ್ ಔಟ್ ಆದರು.
ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಕೆಕೆಆರ್ಗೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್(23) 7ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರಾಣಾ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 57 ರನ್ಗಳಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
19 ಓವರ್ಗಳಲ್ಲಿ 144 ರನ್ಗಳಿಸಿದ್ದ ಕೆಕೆಆರ್ ಮುಸ್ತಫಿಜುರ್ ಎಸೆದ 20ನೇ ಓವರ್ನಲ್ಲಿ ಕೇವಲ 2 ರನ್ಗಳಿಸಲಷ್ಟೇ ಶಕ್ತವಾಯಿತು. ಒಟ್ಟಾರೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂದು 146 ರನ್ಗಳಿಸಿತು.
ತಂಡದ ಅಪ್ಡೇಟ್: ಮಾರ್ಷ್ ಇಂದಿನ ಪಂದ್ಯದಲ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಚೇತನ್ ಸಕಾರಿಯಾ ಗಾಯಗೊಂಡಿರುವ ಖಲೀಲ್ ಅಹ್ಮದ್ ಬದಲಿಗೆ ತಂಡ ಸೇರಿಕೊಂಡಿದ್ದಾರೆ. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆ್ಯರೋನ್ ಫಿಂಚ್, ಹರ್ಷಿತ್ ರಾಣಾ ಮತ್ತು ಬಾಬಾ ಇಂದ್ರಜಿತ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್, ಶಿವಂ ಮಾವಿ ಮತ್ತು ವರುಣ್ ಚಕ್ರವರ್ತಿ ತಂಡದಿಂದ ಹೊರಬಿದ್ದಿದ್ದಾರೆ.
ಪ್ಲೇ ಆಫ್ ದೃಷ್ಠಿಕೋನದಲ್ಲಿ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. 7 ಪಂದ್ಯಗಳನ್ನಾಡಿರುವ ಡೆಲ್ಲಿ 3 ಗೆಲುವು ಮತ್ತು 4 ಸೋಲು ಕಂಡಿದ್ದರೆ, ಕೆಕೆಆರ್ ತಂಡ 8 ಪಂದ್ಯಗಳಲ್ಲಿ 3 ಜಯ ಮತ್ತು 5 ಸೋಲು ಕಂಡು ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಸೀಮಿತ ಓವರ್ಗಳ ಸರಣಿಗೆ ಉಮ್ರಾನ್ಗೆ ಅವಕಾಶ ಕೊಡಿ: ಗವಾಸ್ಕರ್