ಈ ಆವೃತ್ತಿಯ ಐಪಿಎಲ್ ಪಂದ್ಯವೊಂದರಲ್ಲಿ ಕೊನೆಯ ಓವರ್ನಲ್ಲಿ ರಿಂಕು ಸಿಂಗ್ ಅವರಿಂದ 5 ಸಿಕ್ಸ್ ಚಚ್ಚಿಸಿಕೊಂಡು ಬೌಲರ್ ಯಶ್ ದಯಾಳ್ ಈ ಮೂಲಕ ಎಲ್ಲರಿಗೂ ಪರಿಚಯವಾದರು. ಇದೀಗ ಮತ್ತೆ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ. ಅದಕ್ಕೆ ಕಾರಣ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡ ಒಂದು ಪೋಸ್ಟ್. ಗುಜರಾತ್ ಟೈಟಾನ್ಸ್ ಮತ್ತು ಉತ್ತರ ಪ್ರದೇಶ ವೇಗದ ಬೌಲರ್ ಯಶ್ ದಯಾಳ್ ಪೋಸ್ಟ್ ಟೀಕೆಗೆ ಆಹಾರವಾಗಿದೆ. ಇದಕ್ಕವರು ಕ್ಷಮೆಯನ್ನೂ ಯಾಚಿಸಿದ್ದಾರೆ.
ಯಶ್ ದಯಾಳ್ ಪೋಸ್ಟ್ ಏನು?: ದೆಹಲಿಯಲ್ಲಿ ಇತ್ತೀಚಿಗೆ ಸಾಕ್ಷಿ ಎಂಬ ಬಾಲಕಿಯ ಮೇಲೆ ಸಾಹಿಲ್ ಖಾನ್ ಎಂಬಾತ 21 ಬಾರಿ ಚಾಕುವಿನಿಂದ ಚುಚ್ಚಿ ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ. ಕಳೆದ ವರ್ಷ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ಅಫ್ತಾಬ್ ಪೂನಾವಾಲಾ ಎಂಬಾತ ಕತ್ತು ಹಿಸುಕಿ ಕೊಲೆಗೈದು, ಆಕೆಯ ದೇಹವನ್ನು 35 ತುಂಡುಗಳಾಗಿ ಮಾಡಿ ಪ್ರಿಜ್ನಲ್ಲಿಟ್ಟಿದ್ದ. ಈ ಘಟನೆಗಳ ನಂತರ ಲವ್ ಜಿಹಾದ್ ವಿರುದ್ಧದ ಕೆಲವು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಬೌಲರ್ ಯಶ್ ದಯಾಳ್ ಕೂಡಾ ಈ ರೀತಿಯ ಪೋಸ್ಟರ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಯಶ್ ದಯಾಳ್ ಶೇರ್ ಮಾಡಿರುವ ಈ ಪೋಸ್ಟರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟರ್ನಲ್ಲಿ ಕೆಲವು ನೆಟ್ಟಿಗರು ಬಿಸಿಸಿಐ ಮತ್ತು ಗುಜರಾತ್ ಟೈಟಾನ್ಸ್ ಟ್ಯಾಗ್ ಮಾಡಿ ಇವರು ವಿರುದ್ಧ ಯಾವುದೇ ಕ್ರಮವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾನಾ ರೀತಿಯ ಕಾಮೆಂಟ್ಗಳೂ ಬಂದಿವೆ.
ಇದನ್ನು ಗಮನಿಸಿದ ಯಶ್ ದಯಾಳ್ ತಾವು ಹಾಕಿದ್ದ ಇನ್ಸ್ಟಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ. ನಂತರ ಹಿಂದೆ ಪೋಸ್ಟ್ ಮಾಡಿದ್ದ ಸ್ಟೇಟಸ್ಗಾಗಿ ಕ್ಷಮೆ ಯಾಚಿಸಿದ್ದಾರೆ. ಮತ್ತೊಂದು ಪೋಸ್ಟ್ ಅನ್ನೂ ಹಂಚಿಕೊಂಡಿದ್ದಾರೆ. ತಪ್ಪಾಗಿ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಇದಕ್ಕಾಗಿ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ, ದಯವಿಟ್ಟು ದ್ವೇಷ ಹರಡಬೇಡಿ. ಧನ್ಯವಾದಗಳು. ಸಮಾಜದ ಪ್ರತಿಯೊಂದು ಸಮುದಾಯದ ಬಗ್ಗೆಯೂ ನನಗೆ ಗೌರವವಿದೆ ಎಂದು ಬರೆದುಕೊಂಡಿದ್ದಾರೆ
ದೆಹಲಿಯ ಬಾಲಕಿ ಸಾಕ್ಷಿ ಭೀಕರ ಕೊಲೆ ಪ್ರಕರಣ: ದೆಹಲಿಯಲ್ಲಿ ಮೇ 29 ರಂದು ಸಾಹಿಲ್ ಖಾನ್ ಎಂಬಾತ ಸಾಕ್ಷಿ ಎಂಬ ಬಾಲಕಿಯೊಬ್ಬಳನ್ನು ದಾರುಣವಾಗಿ ಕೊಲೆಗೈದ ಸಿಸಿಟಿವಿ ದೃಶ್ಯ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೆಹಲಿಯ ಶಹಬಾದ್ ಡೈರಿಯ ಇ ಬ್ಲಾಕ್ ಪ್ರದೇಶದಲ್ಲಿ ಘಟನೆ ನಡೆದಿತ್ತು. ಪಾತಕಿ 21 ಇರಿದು ಬಾಲಕಿಯನ್ನು ಹತ್ಯೆ ಮಾಡಿದ್ದ. ಸ್ನೇಹಿತೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವಾಗ ರಸ್ತೆಯಲ್ಲಿ ಅಡ್ಡಗಟ್ಟಿ ಸಾಹಿಲ್ ಖಾನ್ ದುಷ್ಕೃತ್ಯ ಎಸಗಿದ್ದ. ಕೊಲೆ ಮಾಡಿ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಹಂತಕನನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದರು.
ಇದನ್ನೂ ಓದಿ: Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ