ಮ್ಯಾಂಚೆಸ್ಟರ್: ಟೀಮ್ ಇಂಡಿಯಾ ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಬಹುದೊಡ್ಡ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.
ಗುರುವಾರದಂದು ವಿರಾಟ್ ಬಳಗ ಮ್ಯಾಂಚೆಸ್ಟರ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ರನ್‌ಮಷಿನ್ ವಿರಾಟ್ ಕೊಹ್ಲಿ 37 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20,000 ರನ್ಗಳಿಸಿದ ಭಾರತದ ಮೂರನೇ ಹಾಗೂ ವಿಶ್ವದಲ್ಲಿ ಹನ್ನೆರಡನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಲಿದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ 20,000 ರನ್ ಗಡಿ ದಾಟಿದ ಭಾರತೀಯ ಆಟಗಾರರು.
ಏಕದಿನದಲ್ಲಿ 11,087, ಟೆಸ್ಟ್ನಲ್ಲಿ 6613 ಹಾಗೂ ಟಿ20ಯಲ್ಲಿ 2263 ರನ್ಗಳ ಮೂಲಕ ಮೂಲಕ ವಿರಾಟ್ ಕೊಹ್ಲಿ ಸದ್ಯ 19,963 ರನ್ ಗಳಿಸಿದ್ದಾರೆ. 131 ಟೆಸ್ಟ್, 223 ಏಕದಿನ ಹಾಗೂ 62 ಟಿ20 ಪಂದ್ಯದಲ್ಲಿ ಕೊಹ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಕೊಹ್ಲಿ ಅತ್ಯಂತ ವೇಗವಾಗಿ 20,000 ರನ್ ಗಳಿಸಲಿದ್ದು, ಇದರೊಂದಿಗೆ ಬ್ರಿಯಾನ್ ಲಾರಾ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ನ್ನು ಹಿಂದಿಕ್ಕಲಿದ್ದಾರೆ.
ವಿಶ್ವಕಪ್ ಸೆಮೀಸ್ನಲ್ಲಿ ಇಂಡೋ-ಪಾಕ್ ಮುಖಾಮುಖಿ... ಅದು ಹೀಗಾದ್ರೆ ಮಾತ್ರ ಸಾಧ್ಯ!
ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿರುವ ಕೊಹ್ಲಿ ಸತತ ಮೂರು ಅರ್ಧಶತಕ ದಾಖಲಿಸಿದ್ದಾರೆ. ಆಸೀಸ್ ವಿರುದ್ಧ 82, ಪಾಕ್ ವಿರುದ್ಧ 77 ಹಾಗೂ ಅಫ್ಘಾನಿಸ್ತಾನ 67 ರನ್ ಗಳಿಸಿ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ.