ನವದೆಹಲಿ: ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ ಕೊಹ್ಲಿ ವೃತ್ತಿ ಜೀವನ ಆರಂಭದಲ್ಲಿ ತಾವು ತಮ್ಮ ರಾಜ್ಯ ತಂಡದಿಂದ ತಿರಸ್ಕೃತಗೊಂಡಾಗ ಹೇಗೆ ವರ್ತಿಸಿದ್ದರೆಂದು ಆನ್ಲೈನ್ ಸಂವಾದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಕೊಹ್ಲಿ ಹಾಗೂ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಸಂಕಷ್ಟದಿಂದ ಹೇಗೆ ಹೊರಬರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಮೊದಲ ಬಾರಿ ನಾನು ರಾಜ್ಯ ತಂಡದಿಂದ ತಿರಸ್ಕೃತಗೊಂಡಾಗ ತಡರಾತ್ರಿ ನಾನು ಸಾಕಷ್ಟು ಕಣ್ಣೀರಿಟ್ಟಿದ್ದೆ ಎಂದು 31 ವರ್ಷದ ಕ್ರಿಕೆಟ್ ಸೂಪರ್ ಸ್ಟಾರ್ ಕೊಹ್ಲಿ ತಿಳಿಸಿದ್ದಾರೆ.
ನಾನು ಬೆಳಗ್ಗೆ ಮೂರು ಬಾರಿ ಜೋರಾಗಿ ಕಿರುಚಿದ್ದೆ , ನಾನು ತಿರಸ್ಕೃತಗೊಂಡಿದ್ದಕ್ಕೆ ನನಗೆ ನಂಬಲಾಗಿರಲಿಲ್ಲ. ಏಕೆಂದರೆ ನಾನು ಬಹಳಷ್ಟು ರನ್ಗಳಿಸಿದ್ದೆ. ಎಲ್ಲ ರೀತಿಯಲ್ಲೂ ನಾನು ಪರಿಪೂರ್ಣನಾಗಿದ್ದೆ. ಅದರೆ ಎಲ್ಲಾ ಹಂತದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ನಾನು ತಿರಸ್ಕೃತಗೊಂಡಿದ್ದೆ.
ನಾನು ನನ್ನ ಕೋಚ್ರನ್ನು 2 ಗಂಟೆಗಳ ಕಾಲ ನಾನು ಏಕೆ ಆಯ್ಕೆಯಾಗಲಿಲ್ಲ? ಎಂದು ಕೇಳುತ್ತಲೇ ಇದ್ದೆ. ಕೊನೆಗೂ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದರೆ ಉತ್ಸಾಹ ಮತ್ತು ಬದ್ದತೆ ಇದ್ದಾಗ ಪ್ರೇರಣೆ ನಿಮ್ಮ ಬಳಿ ಬರುತ್ತದೆ ಎಂದು ಕೊಹ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದಾರೆ.
ಇನ್ನು ತಾಳ್ಮೆ ಎನ್ನುವುದನ್ನೇ ತಿಳಿಯದ ಕೊಹ್ಲಿ 2013ರಲ್ಲಿ ಅನುಷ್ಕಾ ಶರ್ಮಾರನ್ನು ಜಾಹಿರಾತು ಶೂಟಿಂಗ್ ವೇಳೆ ಭೇಟಿ ಮಾಡಿದ ನಂತರ ತಾಳ್ಮೆ ಕಲಿತೆ ಎಂದಿದ್ದಾರೆ.
ಕೆಲವು ವಿಚಾರಗಳು ಕಠಿಣವಾಗಿದ್ದರೂ ಸಹ ನೀವು ನಿಮ್ಮ ಅಹಂಕಾರವನ್ನು ನುಂಗಬೇಕು ಮತ್ತು ಪ್ರತಿಕೂಲ ಸ್ಥಿತಿಯಲ್ಲಿರಬೇಕು, ನಿಮ್ಮ ದಾರಿಯಲ್ಲೇ ಹೋರಾಡುತ್ತಿರಬೇಕು. ಆಗ ಮಾತ್ರ ನೀವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ ಎಂದಿದ್ದಾರೆ.
ಕೊಹ್ಲಿ 2006ರಲ್ಲಿ ಡೆಲ್ಲಿ ತಂಡದ ಪರ ಪದಾರ್ಪಣೆ ಮಾಡಿದ್ದರು. 2 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಇವರು ಇಂದು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.