ಧರ್ಮಶಾಲಾ: ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಗುರುವಾರ ನಡೆಯಲಿದ್ದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 133 ರನ್ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 12000 ರನ್ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಾರ್ಮ್ ಕಂಡುಕೊಳ್ಳುವ ಆಲೋಚನೆಯಲ್ಲಿದ್ದು, ಇದೇ ಸರಣಿಯಲ್ಲಿ ಹಲವು ದಾಖಲೆಗಳ ಪತನ ಮಾಡಲು ಸಹಾ ಕಾತುರದಿಂದಿದ್ದಾರೆ.
ರನ್ ಮಷಿನ್ ವಿರಾಟ್ ಕೊಹ್ಲಿ 239 ಇನ್ನಿಂಗ್ಸ್ಗಳಲ್ಲಿ 11867 ರನ್ಗಳಿಸಿದ್ದಾರೆ. ಈಗಾಗಲೆ ವೇಗವಾಗಿ 9 ಸಾವಿರ,10 ಸಾವಿರ ಹಾಗೂ 11 ಸಾವಿರದ ಮೈಲುಗಲ್ಲನ್ನು ವೇಗವಾಗಿ ತಲುಪಿರುವ ವಿಶ್ವದಾಖಲೆ ಬರೆದಿರುವ ವಿರಾಟ್ ಇಂದಿನ ಪಂದ್ಯದಲ್ಲಿ 133 ರನ್ಗಳಿಸಿದರೆ ವೇಗವಾಗಿ 12 ಸಾವಿರ ರನ್ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.
ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 300 ಇನ್ನಿಂಗ್ಸ್ಗಳಲ್ಲಿ 12 ಸಾವಿರ ರನ್ಗಳನ್ನು ವೇಗವಾಗಿ ತಲುಪಿರುವ ದಾಖಲೆ ಹೊಂದಿದ್ದಾರೆ. ಇವರನ್ನು ಬಿಟ್ಟರೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(314), ಶ್ರೀಲಂಕಾದ ಕುಮಾರ ಸಂಗಾಕ್ಕರ(336), ಸನತ್ ಜಯಸೂರ್ಯ(379) ಮಹೇಲ ಜಯವರ್ದನೆ(399) ನಂತರದ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಈ ಪಂದ್ಯದಲ್ಲಿ ಶತಕಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳಿಸಿದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರಿಕಿ ಪಾಂಟಿಂಗ್ ಜೊತೆ ಹಂಚಿಕೊಳ್ಳಲಿದ್ದಾರೆ.