ಪುಣೆ: ರೋಹಿತ್ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕೆಂಬ ಭಾರತೀಯ ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಿದೆ. ರೋಹಿತ್ ಸಹಾ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಸೀಮಿತ ಓವರ್ಗಳಲ್ಲಿ ಹಿಟ್ಮ್ಯಾನ್ ಅಬ್ಬರ ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಹೀಗಾಗಿ ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ಆರಂಭಿಕರಾಗಿ ಯಶಸ್ಸಿನ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಮಾಧ್ಯಮದವರು ರೋಹಿತ್ ಆಟದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾರಿಂದ ಮುಂದಿನ ಪಂದ್ಯದಲ್ಲೂ ಯಾವ ರೀತಿ ಪ್ರದರ್ಶನ ನಿರೀಕ್ಷೆ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ" ರೋಹಿತ್ ಬಗ್ಗೆ ಫೋಕಸ್ ಮಾಡುವುದನ್ನು ನಿಲ್ಲಿಸಿ, ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ, ಅವರು ಏನು ಮಾಡ್ತಾರೆ, ಹೇಗೆ ಆಡುತ್ತಾರೆ ಎಂಬುದನ್ನು ಅವರಿಗೆ ಬಿಡೋಣ, ಅವರ ಆಟವನ್ನು ಎಂಜಾಯ್ ಮಾಡುವ ಸಮಯ ಇದಾಗಿದೆ ಎಂದಿದ್ದಾರೆ.
ರೋಹಿತ್ ಉತ್ತಮ ಸ್ಥಿರತೆಯಲ್ಲಿದ್ದಾರೆ. ಮೊದಲ ಟೆಸ್ಟ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಮೂಲಕ ವೈಟ್ಬಾಲ್ನಲ್ಲಿ ಆಡುವಂತೆ ಟೆಸ್ಟ್ನಲ್ಲೂ ತಮ್ಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಅವರಿಗಿರುವ ಅನುಭವವನ್ನು ಉಪಯೋಗಿಸಿಕೊಂಡು ನಿರಾಳವಾಗಿ ರನ್ಗಳಿಸುತ್ತಿದ್ದಾರೆ. ಆದರೆ, ಎಲ್ಲಾ ಪಂದ್ಯಗಳಲ್ಲೂ ಅವರನ್ನು ಫೋಕಸ್ ಮಾಡಬಾರದು, ಅವರಿಗೂ ಬ್ರೇಕ್ ಬೇಕಿರುತ್ತದೆ ಎಂದು ಕೊಹ್ಲಿ ಎರಡನೇ ಟೆಸ್ಟ್ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 176 ಹಾಗೂ 2ನೇ ಇನ್ನಿಂಗ್ಸ್ನಲ್ಲಿ 127 ರನ್ಗಳಿಸಿದ್ದರು.