ಜೈಪುರ: ಹಿಮಾಚಲ ಪ್ರದೇಶದ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ವೇಗಿ ಶಾರ್ದುಲ್ ಠಾಕೂರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿಸುವ ಮೂಲಕ ಗಮನ ಸೆಳೆದಿದ್ದಾರೆ.
148 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಠಾಕೂರ್ ಹಿಮಾಚಲ ಪ್ರದೇಶ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 57 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ 92 ರನ್ಗಳಿಸಿ ಕೇವಲ 8 ರನ್ಗಳಿಂದ ಶತಕವಂಚಿತರಾದರು. ಇದು ಅವರು ಮೊದಲ ಲಿಸ್ಟ್ ಎ ಶತಕವಾಗಿದೆ.
ಇವರಿಗೂ ಮುನ್ನ ಕೇವಲ 4 ಓವರ್ಗಳಲ್ಲಿ 8 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರಾದ ಪೃಥ್ವಿ ಶಾ(2) , ಯಶಸ್ವಿ ಜೈಸ್ವಾಲ್(2) ಮತ್ತು ನಾಯಕ ಶ್ರೇಯಸ್ ಅಯ್ಯರ್(2) ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಸೂರ್ಯಕುಮಾರ್ ಯಾದವ್ 75 ಎಸೆತಗಳಲ್ಲಿ 91, ಆದಿತ್ಯ ತಾರೆ 98 ಎಸೆತಗಳಲ್ಲಿ 83, ಹಾಗೂ ಶಾರ್ದುಲ್ ಠಾಕೂರ್ ಅವರ 92 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 321 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಇಂಗ್ಲೆಂಡ್ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ತಂಡಕ್ಕೆ ಮರಳಿದ್ದರಿಂದ ಶಾರ್ದೂಲ್ ಠಾಕೂರ್ರನ್ನು ತಂಡದಿಂದ ಕೈಬಿಟ್ಟು ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಅಹ್ಮದಾಬಾದ್ನಿಂದ ಜೈಪುರಕ್ಕೆ ವಿಮಾನದಲ್ಲಿ ಪಯಣಿಸಿದರೆ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ 10 ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿ ಆ ದಿನವೇ ಮುಂಬೈ ಪರ ಆಡಿ ಗಮನ ಸೆಳೆದಿದ್ದರು.