ದುಬೈ: ಭಾರತದ ಯುವ ಅಂಪೈರ್ ನಿತಿನ್ ಮೆನನ್ 2020-21ರ ಸೀಸನ್ಗಾಗಿ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಐಸಿಸಿ ಸೋಮವಾರ ಪ್ರಕಟಣೆ ಹೊರಡಿಸಿದೆ.
36 ವರ್ಷದ ನಿತಿನ್ ಮೆನನ್ ಇಲ್ಲಿಯವರೆಗೆ ಮೂರು ಟೆಸ್ಟ್ ಪಂದ್ಯಗಳು, 24 ಏಕದಿನ ಪಂದ್ಯಗಳು ಮತ್ತು 16 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಇಂಗ್ಲೆಂಡ್ನ ನಿಗೆಲ್ ಲಾಂಗ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀನಿವಾಸ ವೆಂಕಟರಾಘವನ್ ಮತ್ತು ಸುಂದರಮ್ ರವಿ ನಂತರ ಐಸಿಸಿ ಎಲೈಟ್ ಪ್ಯಾನೆಲ್ ಸೇರಿದ ಭಾರತದ ಮೂರನೇ ಅಂಪೈರ್ ಎಂಬ ಶ್ರೇಯಕ್ಕೆ ಮೆನನ್ ಪಾತ್ರರಾಗಿದ್ದಾರೆ.
ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲಾರ್ಡೈಸ್ (ಅಧ್ಯಕ್ಷ), ಭಾರತದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ಮ್ಯಾಚ್ ರೆಫರಿ ರಂಜನ್ ಮದುಗಲ್ಲೆ ಮತ್ತು ಡೇವಿಡ್ ಬೂನ್ ಅವರಿದ್ದ ಆಯ್ಕೆ ಸಮಿತಿ ಮೆನನ್ ಆವರನ್ನು ಆರಿಸಿದೆ. ಮೆನನ್ ಈ ಮೊದಲು ಎಮಿರೇಟ್ಸ್ ಐಸಿಸಿ ಇಂಟರ್‌ನ್ಯಾಷನಲ್ ಅಂಪೈರ್ಗಳ ಪ್ಯಾನೆಲ್ಲಿನಲ್ಲಿದ್ದರು.
"ಎಲೈಟ್ ಪ್ಯಾನೆಲ್‌ಗೆ ಆಯ್ಕೆಯಾಗಿರುವುದು ನನಗೆ ದೊಡ್ಡ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ. ವಿಶ್ವದ ಪ್ರಮುಖ ಅಂಪೈರ್‌ಗಳು ಮತ್ತು ತೀರ್ಪುಗಾರರೊಂದಿಗೆ ಕಾರ್ಯನಿರ್ವಹಿಸುವುದು ನನ್ನ ದೊಡ್ಡ ಕನಸಾಗಿತ್ತು ಎಂದು ಮೆನನ್ ಹೇಳಿದ್ದಾರೆ.
ಈಗಾಗಲೇ ಟೆಸ್ಟ್, ಏಕದಿನ ಮತ್ತು ಅಂತಾರಾಷ್ಟ್ರೀಯ ಟಿ 20 ಮತ್ತು ಐಸಿಸಿ ಈವೆಂಟ್‌ಗಳಲ್ಲಿ ಕೆಲಸ ನಿರ್ಹಹಿಸಿದ್ದೇನೆ. ಜೊತೆಗೆ ಇಲ್ಲಿ ಬರುವ ದೊಡ್ಡ ಜವಾಬ್ದಾರಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಸವಾಲುಗಳನ್ನು ಎದುರು ನೋಡುತ್ತಿದ್ದೇನೆ ಮತ್ತು ನಾನು ಪಡೆಯುವ ಪ್ರತಿಯೊಂದು ಅವಕಾಶದಲ್ಲೂ ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ. ಭಾರತೀಯ ಅಂಪೈರ್‌ಗಳನ್ನು ಮುಂದೆ ಕರೆದೊಯ್ಯುವುದು ಮತ್ತು ನನ್ನ ಅನುಭವವನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೆನನ್ ತಿಳಿಸಿದ್ದಾರೆ.