ನವದೆಹಲಿ: 1983 ಜೂನ್ 25 ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ಸೃಷ್ಟಿ ಮಾಡಿದ ದಿನ. ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಭಾರತ ತಂಡ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಸಾಧನೆಗೆ 37 ವರ್ಷಗಳು ತುಂಬಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 183 ರನ್‌ಗಳಿಗೆ ಆಲೌಟ್ ಆಗಿತ್ತು. ಆ್ಯಂಡಿ ರಾಬರ್ಟ್ಸ್ ಮೂರು ವಿಕೆಟ್ ಪಡೆದರೆ ಮಾಲ್ಕಮ್ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಮತ್ತು ಲ್ಯಾರಿ ಗೋಮ್ಸ್ ತಲಾ ಎರಡು ವಿಕೆಟ್ ಪಡೆದಿದ್ದರು.
ಭಾರತದ ಪರ ಕೃಷ್ಣಮಾಚಾರಿ ಶ್ರೀಕಾಂತ್ 38 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು 30 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಭಾರತ 140 ರನ್‌ಗಳಿಗೆ ಆಲೌಟ್ ಮಾಡಿ ಇತಿಹಾಸ ಸೃಷ್ಟಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದುಕೊಂಡಿತು. ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಅಮರ್‌ನಾಥ್ ಟ್ಯಾಟ್ 26 ರನ್ ಗಳಿಸಿದ್ದಲ್ಲದೆ ಪ್ರಮುಖ 3 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.