ಸೌತಾಂಪ್ಟನ್: ಶನಿವಾರ ಪಾಕಿಸ್ತಾನದ ವಿರುದ್ಧ ತಮ್ಮ ವೃತ್ತಿ ಜೀವನದ 2ನೇ ಶತಕ ದಾಖಲಿಸಿದ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಳೆದ ಎರಡು ವಾರಗಳಿಂದ ಸಕಾರಾತ್ಮಕ ದೃಷ್ಟಿಕೋನದಲ್ಲಿ ಆಲೋಚಿಸಲು ಶುರುಮಾಡಿದ್ದರಿಂದ ತಂಡಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲವಾದ ನಂತರ ಜೋಸ್ ಬಟ್ಲರ್ರನ್ನು ತಂಡದಿಂದ ಕೈಬಿಡುವ ಮಾತು ಕೇಳಿಬಂದಿದ್ದವು. ಆದೇ ಆಲೋಚನೆ ಕೂಡ ಬಟ್ಲರ್ರಲ್ಲೂ ಮೂಡಿತ್ತು. ಆದರೆ ಮೊದಲ ಟೆಸ್ಟ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿದ್ದರು.
ಒಂದೆರಡು ಪಂದ್ಯಗಳ ಹಿಂದೆ ನನ್ನನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ನಾನು ಆಲೋಚಿಸುತ್ತಿದ್ದೆ. ಖಂಡಿತವಾಗಿಯೂ ಕೆಲವು ವಾರಗಳಿಂದ ನನ್ನನ್ನು ನಾನೆ ಪ್ರಶ್ನೆ ಮಾಡಿಕೊಂಡಿದ್ದೆ. ನನ್ನಲ್ಲಿದ್ದ ಅಳುಕು ಮನೋಭಾವೆನಯನ್ನು ಹೋಗಲಾಡಿಸಲು ಉತ್ತಮವಾದ ದಾರಿ ಕಂಡುಕೊಂಡೆ. ಈ ಸಂದರ್ಭದಲ್ಲಿ ನಿಮ್ಮ ಮೇಲಿನ ನಂಬಿಕೆಯನ್ನು ನೀವು ಉಳಿಸಿಕೊಂಡಾಗ, ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚು ದೂರ ಶ್ರಮಿಸಬೇಕಾಗಿಲ್ಲ ಎಂದು ಬಟ್ಲರ್ ಶತಕ ಸಿಡಿಸಿದ ನಂತರ ತಿಳಿಸಿದ್ದಾರೆ.
ಬಟ್ಲರ್ ಮೂರನೇ ಪಂದ್ಯದಲ್ಲಿ ಜಾಕ್ ಕ್ರಾಲೆ ಅವರ ಜೊತೆಗೂಡಿ ಬರೋಬ್ಬರಿ 359 ರನ್ಗಳ ಜೊತೆಯಾಟ ನಡೆಸಿದ್ದಾರೆ. ಕ್ರಾಲೆ 267 ಹಾಗೂ ಬಟ್ಲರ್ 152 ರನ್ಗಳಿಸಿ 583 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.
ನಾನು ದೀರ್ಘಕಾಲ ಬ್ಯಾಟಿಂಗ್ ಮಾಡಬಲ್ಲೆ ಎಂದು ಸಾಬೀತುಪಟಿಸಿದ್ದಕ್ಕೆ ಸಂತೋಷವಿದೆ. ನಾನು ಇದನ್ನು ಎಲ್ಲಿಯವರೆಗೆ ಸಾಧಯವೋ ಅಲ್ಲಿಯವರೆಗೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಿಜವಾಗಿಯೂ ನಾನು ಮೊದಲ ಬಾರಿಗೆ ಇಷ್ಟೊಂದು ಎಸೆತಗಳನ್ನು ಎದುರಿಸಿದ್ದೇನೆ . ಯಾವಾಗ ನಿಮ್ಮ ಬ್ಯಾಟಿಂಗ್ ಸುಧಾರಿಸಲು ಹಾಗೂ ಅದರ ಕಡೆಗೆ ಕೇಂದ್ರೀಕರಿಸಲು ಬಯಸಿದಾಗ ನೀವು ಆಲೋಚಿಸುವ ವಿಚಾರಗಳನು ಕ್ರಮೇಣ ಇಡೇರುತ್ತವೆ ಎಂದು ಬಟ್ಲರ್ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ಈಗಾಗಲೆ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. 2ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲೂ ಅತಿಥೇಯ ತಂಡ ಹಿಡಿತ ಸಾಧಿಸಿದ್ದು, ಮಳೆ ಅಡಚಣೆ ಮಾಡದಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.