ಸಿಡ್ನಿ: ನವೆಂಬರ್ 27ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಗಾಗಿ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಗುರವಾರ ಸಿಡ್ನಿ ತಲುಪಿದೆ.
ಐಪಿಎಲ್ ಮುಗಿದ ಬಳಿಕ ಬುಧವಾರ ರಾತ್ರಿ ಕೊಹ್ಲಿ ಮತ್ತು ಬಳಗ ಪಿಪಿಇ ಕಿಟ್ ಮತ್ತು ಮಾಸ್ಕ್ ಧರಿಸಿ ದುಬೈನಲ್ಲಿ ವಿಮಾನವೇರಿದ್ದರು. ಇಂದು ಸಿಡ್ನಿಗೆ ತಲುಪಿರುವ ತಂಡ, ಅಲ್ಲಿ ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿರಲಿದೆ.
ಭಾರತೀಯರ ಜೊತೆಗೆ ಐಪಿಎಲ್ನ ಭಾಗವಾಗಿದ್ದ ಸ್ಟಿವ್ ಸ್ಮಿತ್, ಟೇವಿಡ್ ವಾರ್ನರ್ ಸೇರಿದಂತೆ ಆಸ್ಟ್ರೇಲಿಯಾ ಆಟಗಾರರು ಕೂಡ ತಮ್ಮ ಸಿಟಿಯನ್ನು ತಲುಪಿದ್ದಾರೆ. ಇದೀಗ ಎಲ್ಲಾ ಆಟಗಾರರು ಕಡ್ಡಾಯವಾಗಿರುವ ಎರಡು ವಾರಗಳ ಕ್ವಾರಂಟೈನ್ನಲ್ಲಿರಬೇಕಾಗಿದೆ.
ನವೆಂಬರ್ 27ರಿಂದ ಪ್ರವಾಸದ ಮೊದಲ ಪಂದ್ಯ ಏಕದಿನ ಕ್ರಿಕೆಟ್ ಮೂಲಕ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. 29ರಂದು ಇದೇ ಮೈದಾನದಲ್ಲಿ 2ನೇ ಪಂದ್ಯ ನಡೆದರೆ, ಡಿಸೆಂಬರ್ 2 ರಂದು ಕೊನೆಯ ಏಕದಿನ ಹಾಗೂ ಡಿಸೆಂಬರ್ 4ರಂದು ಮೊದಲ ಟಿ20 ಕಾನ್ಬೆರಾದಲ್ಲಿ ನಡೆಯಲಿದೆ. ನಂತರ ಡಿಸೆಂಬರ್ 6 ಮತ್ತು 8 ರಂದು ಕೊನೆಯ 2 ಟಿ20 ಪಂದ್ಯಗಳು ಸಿಡ್ನಿಯಲ್ಲಿ ನಡೆಯಲಿವೆ.
ಡಿಸೆಂಬರ್ 17 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಅಡಿಲೇಡ್ನಲ್ಲಿ ಆರಂಭವಾಗಲಿದೆ.