ಹೈದರಾಬಾದ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟವಾಗಿದೆ.
ಬುಧವಾರ ಬಿಡುಗಡೆಯಾಗಿರುವ ಟಿ20 ರ್ಯಾಂಕಿಂಗ್ನಲ್ಲಿ ರೋಹಿತ್ ಶರ್ಮಾ(664 ಅಂಕ) ಬ್ಯಾಟಿಂಗ್ ವಿಭಾಗದಲ್ಲಿ ಎಂಟನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕ್ ಆಟಗಾರ ಬಾಬರ್ ಅಜಮ್ (896 ಅಂಕ) ಭಾರಿ ಅಂತರದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆಸೀಸ್ ಆಲ್ರೌಂಡರ್ ಗ್ಲೆನ್ಸ್ ಮ್ಯಾಕ್ಸ್ವೆಲ್( 815 ಅಂಕ) ಕಾಣಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ( 659 ಅಂಕ) ಒಂದು ಸ್ಥಾನ ಏರಿಕೆಯೊಂದಿಗೆ 11ನೇ ಸ್ಥಾನ ಪಡೆದಿದ್ದಾರೆ. ಅಗ್ರ ಹತ್ತರಲ್ಲಿ ಇನ್ನೋರ್ವ ಆಟಗಾರನೆಂದರೆ ಕನ್ನಡಿಗ ಕೆ.ಎಲ್.ರಾಹುಲ್( 662 ಅಂಕ)
ಅಫ್ಘನ್ ಆಟಗಾರ ಜೀವನಶ್ರೇಷ್ಠ ಸಾಧನೆಯ ಐದನೇ ಸ್ಥಾನ ಪಡೆದಿದ್ದಾರೆ. ಹಝ್ರತುಲ್ಲಾ ಝಝೈ(727 ಅಂಕ) ಮೊದಲ ಐದು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್(757 ಅಂಕ) ಮೊದಲ ಸ್ಥಾನದಲ್ಲಿದ್ದರೆ, 14ನೇ ಸ್ಥಾನದಲ್ಲಿರುವ ಕುಲ್ದೀಪ್ ಯಾದವ್( 632 ಅಂಕ) ಟಾಪ್ 20 ಒಳಗಿರುವ ಏಕೈಕ ಭಾರತೀಯ ಬೌಲರ್.
ಇನ್ನು ತಂಡಗಳ ಶ್ರೇಯಾಂಕದಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದ್ದರೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ನಾಲ್ಕನೇ ಸ್ಥಾನ ಪಡೆದಿದೆ.
