ಕೊಲಂಬೊ: ಡೆಡ್ಲಿ ವೈರಸ್ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಪ್ರಾಣಕ್ಕೆ ಕುತ್ತು ತರುತ್ತಿರುವ ಮಾರಕ ರೋಗಾಣುವಿನಿಂದ ಜನರ ರಕ್ಷಣೆ ಮಾಡಲು ಜಗತ್ತಿನ ಎಲ್ಲ ದೇಶಗಳು ಹರಸಾಹಸ ಪಡುತ್ತಿವೆ. ಈ ವೈರಸ್ ಹರಡುವ ಆತಂಕದಿಂದ ಮಹತ್ವದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ರದ್ದಾಗುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ.
ಲಕ್ನೋ ಹಾಗೂ ಕೋಲ್ಕತ್ತಾದಲ್ಲಿ ನಡೆಯಬೇಕಾಗಿದ್ದ ಏಕದಿನ ಕ್ರಿಕೆಟ್ ಪಂದ್ಯ ರದ್ಧುಗೊಂಡಿದ್ದು, ದ. ಆಫ್ರಿಕಾ ತಂಡ ಇದೀಗ ತವರಿಗೆ ಮರಳಲು ಮುಂದಾಗಿದೆ. ಇದರ ಬೆನ್ನಲ್ಲೇ ಮಾರ್ಚ್ 19ರಿಂದ ಇಂಗ್ಲೆಂಡ್-ಶ್ರೀಲಂಕಾ ನಡುವೆ ಆರಂಭಗೊಳ್ಳಬೇಕಾಗಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಂದೂಡಿಕೆಯಾಗಿದೆ.
ಈಗಾಗಲೇ ಇಂಗ್ಲೆಂಡ್ ತಂಡ ಶ್ರೀಲಂಕಾ ಪ್ರವಾಸದಲ್ಲಿದ್ದು, ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ತನ್ನ ಆಟಗಾರರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ನಿಗದಿಯಾಗಿರುವ ಪ್ರಕಾರ, ಮಾರ್ಚ್ 19ರಂದು ಗಾಲೆ ಮೈದಾನ ತದ ನಂತರ ಕೊಲಂಬೊದಲ್ಲಿ ಟೆಸ್ಟ್ ಪಂದ್ಯಗಳು ನಡೆಯಬೇಕಾಗಿತ್ತು. ಆದರೀಗ ಪಂದ್ಯಗಳು ಮುಂದೂಡಿಕೆಯಾಗಿವೆ. ಇನ್ನು ಜೂನ್ ತಿಂಗಳಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಜತೆ ಕ್ರಿಕೆಟ್ ಸರಣಿ ಆಡಬೇಕಾಗಿದ್ದು, ಅದೂ ಕೂಡಾ ರದ್ದಾಗುವ ಸಾಧ್ಯತೆ ಕಾಣಿಸಿದೆ.
ಕೊರೊನಾ ವೈರಸ್ ಭೀತಿಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದ್ದು, ದಿಗ್ಗಜರ ಕ್ರಿಕೆಟ್ ಟೂರ್ನಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಕೂಡ ನಡೆಯುತ್ತಿಲ್ಲ.