ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳು ಗಾಯಕ್ಕೊಳಗಾದ ಬಳಿಕ, ತಂಡದ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆದರೂ ಚೇತರಿಕೆ ಕಾಣದ ಕಾರಣ ವಿಶ್ವಕಪ್ ಮಹಾ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ 117ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಶಿಖರ್, ಇದೇ ವೇಳೆ ಹೆಬ್ಬೆರಳಿನ ಗಾಯಕ್ಕೊಳಗಾಗಿ, ತಂಡದಿಂದ ಹೊರಬಿದ್ದಿದ್ದರು. ಆದರೆ, ಇವರ ಮೇಲೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮೂರು ವಾರಗಳ ಕಾಲ ನಿಗಾವಹಿಸಿತ್ತು. ಹೆಬ್ಬೆರಳಿಗೆ ಪ್ಲಾಸ್ಟರ್ ಹಾಕಿದ್ದರಿಂದ ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನ ಕಾಯ್ದುನೋಡಬೇಕಾಗುತ್ತದೆ ಎಂದು ವಿರಾಟ್ ಕೊಹ್ಲಿ ಈ ಹಿಂದೆ ತಿಳಿಸಿದ್ದರು.
ಶಿಖರ್ ಗಾಯಗೊಂಡಿದ್ದರಿಂದ ಟೀಂ ಇಂಡಿಯಾ ರಿಷಭ್ ಪಂತ್ ಅವರನ್ನ ಬ್ಯಾಕಪ್ ಆಟಗಾರನಾಗಿ ಇಂಗ್ಲೆಂಡ್ಗೆ ಕರೆಯಿಸಿಕೊಂಡಿತು. ಟೂರ್ನಿಯಿಂದ ಶಿಖರ್ ಹೊರಬಿದ್ದಿರುವುದು ಖಚಿತಗೊಳ್ಳದ ಕಾರಣಕ್ಕಾಗಿ ಟೀಂ ಇಂಡಿಯಾ ಪಂತ್ ಡ್ರೆಸ್ಸಿಂಗ್ ರೂಂ ಸೇರಿಕೊಂಡಿರಲಿಲ್ಲ. ಇದೀಗ ಶಿಖರ್ ಧವನ್ ವಿಶ್ವಕಪ್ನಿಂದ ಹೊರಗುಳಿಯುತ್ತಿರುವ ಮಾಹಿತಿ ಹೊರಹಾಕಿದ್ದರಿಂದ, ಅವರ ಸ್ಥಾನ ಪಂತ್ ತುಂಬಲಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ತಂಡದ ಮ್ಯಾನೇಜರ್ ಸುನೀಲ್ ಸುಬ್ರಮಣಿಯಮ್,ಶಿಖರ್ ಧವನ್ ಅವರ ಎಡಗೈ ಅಂಗೈ ಮುರಿತುಗೊಂಡಿದ್ದು, ಜುಲೈ ಮಧ್ಯದವರೆಗೂ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದು, ರಿಷಭ್ ಪಂತ್ಗೆ ತಂಡ ಸೇರಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪಾಕ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು, ರೋಹಿತ್ ಜತೆ ಇನ್ನಿಂಗ್ಸ್ ಆರಂಭಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ ತಂಡವನ್ನ ಸೇರಿಕೊಂಡಿದ್ದಾರೆ.