ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅನಿರುದ್ಧ ಬೋಸ್ ಅವರು ಈ ವಿಷಯವನ್ನು ಸಾಮಾನ್ಯ ಪೀಠದ ಮುಂದೆ ಮಾರ್ಚ್ 16ರಂದು ತಿಳಿಸಬೇಕೆಂದು ಅರ್ಜಿದಾರರಿಗೆ ಸೂಚನೆ ನೀಡಿತು. ಹೋಳಿ ವಿರಾಮದ ಬಳಿಕ ಮಾರ್ಚ್ 16ರಂದು ಕೋರ್ಟ್ ರಿ ಓಪನ್ ಆಗಲಿದೆ.
" ನ್ಯಾಯಾಲಯ ರಿ ಓಪನ್ ಆದ ಬಳಿಕ ಈ ವಿಷಯದ ಕುರಿತು ಅರ್ಜಿ ಸಲ್ಲಿಸಬಹುದು. ಮಾರ್ಚ್ 16ರಂದು ಈ ವಿಷಯವನ್ನು ನ್ಯಾಯಾಲಯದ ಮುಂದೆ ಉಲ್ಲೇಖಿಸಬಹುದು" ಎಂದು ಅರ್ಜಿಯನ್ನು ಸಲ್ಲಿಸಿದ ನ್ಯಾಯಪೀಠದ ವಕೀಲ ಮೋಹನ್ ಬಾಬು ಅಗರ್ವಾಲ್ಗೆ ನ್ಯಾಯಮೂರ್ತಿಗಳು ಹೇಳಿದರು.
ಐಪಿಎಲ್ - 2020 ಮಾರ್ಚ್ 29ರಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಪಂದ್ಯದಲ್ಲಿ 40,000ಕ್ಕೂ ಅಧಿಕ ಪ್ರೇಕ್ಷಕರಿರುತ್ತಾರೆ. ಈ ಸಂದರ್ಭದಲ್ಲಿ ರೋಗ ಹರಡದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮೋಹನ್ ಬಾಬು ಅಗರ್ವಾಲ್ ಅರ್ಜಿಯಲ್ಲಿ ಹೇಳಿದ್ದರು.