ನವದೆಹಲಿ: ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಯಕ ರವಿಕುಮಾರ್ ಸಮರ್ಥ್ ಮತ್ತು ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಶತಕಗಳ ನೆರವಿನಿಂದ ಕೇರಳ ವಿರುದ್ಧ ಕರ್ನಾಟಕ 80 ರನ್ಗಳ ದಿಗ್ವಿಜಯ ಸಾಧಿಸಿ ಸತತ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಟೂರ್ನಿಯುದ್ದಕ್ಕೂ ರನ್ಗಳ ಹೊಳೆ ಹರಿಸುತ್ತಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್ಮನ್ಗಳಾದ ಪಡಿಕ್ಕಲ್ ಮತ್ತು ಸಮರ್ಥ್ ಇಂದಿನ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದರು. ಪಡಿಕ್ಕಲ್ 119 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 101 ರನ್ಗಳಿಸಿದರೆ, ಸಮರ್ಥ್ 158 ಎಸೆತಗಳಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 192 ರನ್ಗಳಿಸಿ ಔಟಾಗುವ ಮೂಲಕ ಕೇವಲ 8 ರನ್ಗಳಿಂದ ದ್ವಿಶತಕ ತಪ್ಪಿಸಿಕೊಂಡರು.
ಈ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 249 ರನ್ ಸೇರಿಸಿತು. 101 ರನ್ಗಳಿಸಿದ್ದ ಪಡಿಕ್ಕಲ್ 43ನೇ ಓವರ್ನಲ್ಲಿ ಔಟಾದರೆ, ಸಮರ್ಥ್ 49ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ವಿಕೆಟ್ ಬಿದ್ದ ನಂತರ ಅಬ್ಬರಿಸಿದ ಮನೀಶ್ ಪಾಂಡೆ ಕೇವಲ 20 ಎಸೆತಗಳಲ್ಲಿ 34 ರನ್ಗಳಿಸಿ ತಂಡದ ಮೊತ್ತವನ್ನು 338 ರನ್ಗಳಿಗೆ ಹೆಚ್ಚಿಸಿದರು.
ಕರ್ನಾಟಕದ 3 ವಿಕೆಟ್ಗಳನ್ನು ಎನ್ಪಿ ಬಾಸಿಲ್ ಪಡೆದುಕೊಂಡರು. ಅನುಭವಿ ಶ್ರೀಶಾಂತ್ 73 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಇನ್ನು 339 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕೇರಳ ತಂಡ 43.4 ಓವರ್ಗಳಲ್ಲಿ 258 ರನ್ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ರಾಬಿನ್ ಉತ್ತಪ್ಪ (2), ರೋಹನ್ ಕನ್ನುಮ್ಮಲ್ (0) ಮತ್ತೊಮ್ಮೆ ವಿಫಲರಾದರು. ವಿಷ್ಣು ವಿನೋದ್ (28) ನಾಯಕ ಸಚಿನ್ ಬೇಬಿ (27) ಕೂಡ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು,
ಆದರೆ ವತ್ಸಲ ಗೋವಿಂದ್ (92) ಮತ್ತು ಮೊಹಮ್ಮದ್ ಅಜರುದ್ದೀನ್ 34 ಎಸೆತಗಳಲ್ಲಿ 52 ರನ್ಗಳಿಸಿ ಕರ್ನಾಟಕ ಬೌಲರ್ಗಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರಾದರೂ, ಇವರ ಹೋರಾಟ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಕರ್ನಾಟಕ ಪರ ರೋನಿತ್ ಮೋರೆ 35 ರನ್ ನೀಡಿ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದರು.
ಇದನ್ನು ಓದಿ:ಸತತ 4ನೇ ಶತಕ ಸಿಡಿಸಿ ಸಂಗಕ್ಕಾರ ದಾಖಲೆ ಸರಿಗಟ್ಟಿದ ಪಡಿಕ್ಕಲ್