ಮುಂಬೈ: 24 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್, ಕಾಡಿ ಬೇಡಿ ಓಪನ್ ಸ್ಥಾನ ಪಡೆದುಕೊಂಡಿದ್ದೆ ಎಂದಿದ್ದಾರೆ.
1994ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸಚಿನ್ ತೆಂಡೂಲ್ಕರ್ ಓಪನರ್ ಸ್ಥಾನದಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದೆ ಎಂದಿದ್ದಾರೆ. ಒಂದೇ ಒಂದು ಅವಕಾಶ ನೀಡಿ, ನಾನು ಇದರಲ್ಲಿ ಫೇಲ್ ಆದರೆ ಮತ್ತೆ ಎಂದಿಗೂ ನಿಮ್ಮ ಬಳಿ ಬರೋದಿಲ್ಲ ಎಂದು ಓಪನರ್ ಸ್ಥಾನಕ್ಕಾಗಿ ಕೇಳಿಕೊಂಡಿದ್ದೆ ಎಂದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ಸಚಿನ್, 49 ಎಸೆತಗಳಲ್ಲಿ 82 ರನ್ ಸಿಡಿಸಿದ್ದರು. ಸರಣಿಯ 5 ಏಕದಿನ ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿ ಮಿಂಚಿದ್ದರು. ಅಲ್ಲಿಂದ ನಿವೃತ್ತಿ ಘೋಷಣೆ ಮಾಡುವತನಕ ಸಚಿನ್ ಓಪನರ್ ಸ್ಥಾನದಲ್ಲೆ ಕಣಕ್ಕಿಳಿಯುತ್ತಿದ್ದರು.
ಭಾರತ ತಂಡದ ಪರ 463 ಏಕದಿನ ಪಂದ್ಯಗಳನ್ನ ಆಡಿರುವ ಮಾಸ್ಟರ್ ಬ್ಲಾಸ್ಟರ್, 49 ಶತಕ ಸಿಡಿಸಿದ್ದು, ಒಟ್ಟು 18,426 ರನ್ ಗಳಿಸಿದ್ದಾರೆ.