ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋಲುತ್ತಿದ್ದ ಪಂದ್ಯವನ್ನು ತನ್ನ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈ ಆಗಲು ನೆರವಾಗಿದ್ದ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ರನ್ನು ಸೂಪರ್ ಓವರ್‌ನಲ್ಲಿ ಆಡಿಸದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ಕಾರಣ ಬಹಿರಂಗಪಡಿಸಿದ್ದಾರೆ.
ಮುಂಬೈ ತಂಡ ಗೆಲ್ಲಲು ಕೊನೆಯ ನಾಲ್ಕು ಓವರ್ಗಳಲ್ಲಿ 80 ರನ್ಗಳ ಅವಶ್ಯಕತೆಯಿತ್ತು. ನಿಜಕ್ಕೂ ಆರ್ಸಿಬಿಗೆ ಸುಲಭ ಜಯ ಸಿಗಬಹುದೆಂದೇ ನಿರೀಕ್ಷಿಸಲಾಗಿತ್ತು. ಆದರೆ, ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಪಂದ್ಯದ ಗತಿ ಬದಲಿಸಿದರು. ಈ ಜೋಡಿ 17ನೇ ಓವರ್‌ನಲ್ಲಿ 27, 18ನೇ ಓವರ್‌ನಲ್ಲಿ 22, 19 ಓವರ್‌ನಲ್ಲಿ 12 ರನ್ ಗಳಿಸಿತ್ತು.
ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು. ಮೊದಲೆರಡು ಎಸೆತಗಳಲ್ಲಿ ಸಿಂಗಲ್ಸ್ ಮಾತ್ರ ಬಂದಿದ್ದರಿಂದ 4 ಎಸೆತಗಳಲ್ಲಿ 17 ರನ್ಗಳ ಅಗತ್ಯವಿತ್ತು. ಆದರೆ, ಕಿಶನ್, ಇಸುರು ಉದಾನ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ 5ನೇ ಎಸೆತದಲ್ಲಿ ಔಟಾದರು. ಕೊನೆಯ ಎಸೆತದಲ್ಲಿ 5 ರನ್ಗಳ ಅವಶ್ಯಕತೆಯಿದ್ದಾಗ ಪೊಲಾರ್ಡ್ ಫೋರ್ ಸಿಡಿಸಿ ಪಂದ್ಯ ಟೈ ಆಗುವಂತೆ ಮಾಡಿದರು.
ಆದರೆ, ಸೂಪರ್ ಓವರ್‌ನಲ್ಲಿ ಪೊಲಾರ್ಡ್ ಜೊತೆಗೆ ಕಿಶನ್ ಬದಲಾಗಿ ಹಾರ್ದಿಕ್ ಪಾಂಡ್ಯರನ್ನು ಕಳುಹಿಸಲಾಗಿತ್ತು. ಈ ಜೋಡಿ ಕೇವಲ 7 ರನ್ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ 8 ರನ್‌ಗಳನ್ನು ಚೇಸ್ ಮಾಡಿ ಸುಲಭ ಜಯ ಸಾಧಿಸಿತು. ಆದರೆ, ಫಾರ್ಮ್ನಲ್ಲಿದ್ದ ಹಾಗೂ ಸೈನಿಗೆ ಉತ್ತಮ ಬೌಂಡರಿ-ಸಿಕ್ಸರ್ ಸಿಡಿಸಿದ್ದ ಕಿಶನ್ರನ್ನು ಏಕೆ ಬ್ಯಾಟಿಂಗ್‌ಗೆ ಕಳುಹಿಸಲಿಲ್ಲ ಎಂಬುದನ್ನು ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಬಹಿರಂಗ ಪಡಿಸಿದ್ದಾರೆ.
'ಇಶಾನ್ ಕಿಶಾನ್ ಸುದೀರ್ಘ ಇನ್ನಿಂಗ್ಸ್ ಆಡಿ ದಣಿದಿದ್ದರು. ಅವರು ಸೂಪರ್ ಓವರ್ ಸಂದರ್ಭದಲ್ಲಿ ಆರಾಮದಾಯಕವಾಗಿ ಕಾಣಿಸಲಿಲ್ಲ. ನಾವು ಕೂಡ ಅವರನ್ನೇ ಕಳುಹಿಸಬೇಕು ಎಂದುಕೊಂಡಿದ್ದೆವು. ಆದರೆ, ಅವರು ಫ್ರೆಶ್ ಆಗಿ ಕಾಣಿಸಿಲಿಲ್ಲ. ಹಾಗಾಗಿ, ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ಸಮರ್ಥರಾದ ಹಾರ್ದಿಕ್ ಪಾಂಡ್ಯರನ್ನು ಸೂಪರ್ ಓವರ್‌ನಲ್ಲಿ ಕಳುಹಿಸಿದೆವು. ನಾವು 7 ರನ್‌ಗಳನ್ನು ಗಳಿಸಿದ್ರೂ, ಬೌಲಿಂಗ್ ವೇಳೆ ಬಿಟ್ಟುಕೊಟ್ಟ ಒಂದು ಅನಿರೀಕ್ಷಿತ ಬೌಂಡರಿಯಿಂದ ಪಂದ್ಯ ಸೋಲಬೇಕಾಯಿತು. ಆದರೆ, ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ್ದ ರೀತಿ ಅದ್ಭುತವಾಗಿತ್ತು' ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.