ಜಮ್ಮು : ರಣಜಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡ(206) ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ತನ್ನ ಚಾಣಾಕ್ಷ ಬೌಲಿಂಗ್ ದಾಳಿಯ ನೆರವಿನಿಂದ ಜಮ್ಮು- ಕಾಶ್ಮೀರದ ವಿರುದ್ಧ 14 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದು ಸೆಮಿಫೈನಲ್ ದಾರಿ ಸುಗಮಗೊಳಿಸಿಕೊಂಡಿದೆ.
ಕ್ವಾರ್ಟರ್ ಫೈನಲ್ನ ಮೊದಲೆರಡು ದಿನ ಮಳೆಯಾಟಕ್ಕೆ ಸೀಮಿತವಾದರೆ, ಮೂರನೇ ದಿನ ಜಮ್ಮು-ಕಾಶ್ಮೀರ ಬೌಲರ್ಗಳ ಮಾರಕ ದಾಳಿಗೆ ಸಿಲುಕಿ ಕರ್ನಾಟಕ ತಂಡ 206ರನ್ಗಳಿಗೆ ಆಲೌಟ್ ಆಗಿತ್ತು. ಆದರೆ, ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಕರ್ನಾಟಕ ಬೌಲರ್ಗಳು ಜಮ್ಮು-ಕಾಶ್ಮೀರ ತಂಡವನ್ನು 192 ರನ್ಗಳಿಗೆ ಕಟ್ಟಿಹಾಕುವ ಮೂಲಕ 14 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸೆಮಿಫೈನಲ್ ಆಸೆ ಬಲಿಷ್ಠಗೊಳಿಸಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರ ತಂಡ ನಿನ್ನೆ 82ಕ್ಕೆ 2 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿತ್ತು. ಆದರೆ, ಮೈಸೂರಿನ ಯುವ ಬೌಲರ್ ಪ್ರಸಿದ್ ಕೃಷ್ಣ ದಿನದ ಆರಂಭದಲ್ಲೇ 25 ರನ್ಗಳಿಸಿದ್ದ ಶುಭಮ್ ಪಂಡಿತ್ ಹಾಗೂ ಜಮ್ಮು-ಕಾಶ್ಮೀರ ತಂಡದ ನಾಯಕ ಪರ್ವೇಜ್ ರಸೂಲ್ ವಿಕೆಟ್ ಪಡೆದು ಕರ್ನಾಟಕ ಪಾಳೆಯದಲ್ಲಿ ನಗು ಮೂಡಿಸಿದರು.
ಆದರೆ, 5ನೇ ವಿಕೆಟ್ ಜೊತೆಯಾಟದಲ್ಲಿ ಖಜುರಿಯಾ(62) ಹಾಗೂ ಅಬ್ಧುಲ್ ಸಮದ್(43) 35 ರನ್ಗಳಿಸಿ ಮತ್ತೆ ತಮ್ಮ ತಂಡವನ್ನು ಸುಸ್ಥಿತಿಗೆ ತರುವ ಪ್ರಯತ್ನ ಮಾಡಿದರು. ಈ ಹಂತದಲ್ಲಿ ಕಣಕ್ಕಿಳಿದ ರೋನಿತ್ ಮೋರೆ ಖಜುರಿಯಾ ವಿಕೆಟ್ ಪಡೆದರೆ, ಸುಚಿತ್ 43 ರನ್ಗಳಿಸಿದ್ದ ಸಮದ್ ವಿಕೆಟ್ ಪಡೆದರು. ಇವರಿಬ್ಬರ ವಿಕೆಟ್ ಪತನದ ನಂತರ ಜಮ್ಮು-ಕಾಶ್ಮೀರ ತಂಡದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ನಿಲ್ಲಲು ವಿಫಲರಾಗಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ವಿಕೆಟ್ ಕೀಪರ್ ಫಜಿಲ್ ರಶೀದ್ 9, ಅಕ್ಯುಬ್ ನಬಿ 14, ಅಬಿದ್ ಮುಷ್ತಾಕ್ 4, ಉಮರ್ ನಜಿರ್ ಮಿರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಒಟ್ಟಾರೆ 62.4 ಓವರ್ಗಳಲ್ಲಿ 192 ರನ್ಗಳಿಗೆ ಆಲೌಟ್ ಆಗುವ ಮೂಲಕ ನಿರಾಶೆ ಅನುಭವಿಸಿದರು.
ಕರ್ನಾಟಕದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ ಕೃಷ್ಣ 4 ವಿಕೆಟ್, ರೋನಿತ್ ಮೋರೆ 2, ಸುಚಿತ್ 2 ಹಾಗೂ ಕೆ. ಗೌತಮ್ 1 ವಿಕೆಟ್ ಪಡೆದು ಜಮ್ಮು-ಕಾಶ್ಮೀರ್ ತಂಡವನ್ನು 200ರೊಳಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಮುನ್ನಡೆಗೆ ಕಾರಣರಾದರು.