ಮುಂಬೈ: 2015 ರಿಂದ ಭಾರತ ಎ ಹಾಗೂ ಅಂಡರ್ 19 ತಂಡಗಳ ನೇತೃತ್ವ ವಹಿಸಿಕೊಂಡಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ದ್ರಾವಿಡ್ ಸ್ಥಾನಕ್ಕೆ ಸಿತಾನ್ಶು ಕೊಟಕ್ ಹಾಗೂ ಪರಾಸ್ ಮಹಂಬ್ರೆ ಅವರನ್ನು ಮುಖ್ಯ ಕೋಚ್ಗಳಾಗಿ ನೇಮಕ ಮಾಡಲಾಗಿದೆ.
ಕೆಲವು ತಿಂಗಳ ಹಿಂದೆ ದ್ರಾವಿಡ್ರನ್ನು ಬಿಸಿಸಿಐ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಇಂಡಿಯಾ ಎ ಮತ್ತು ಅಂಡರ್ 19 ತಂಡಗಳ ಜೊತೆ ದೀರ್ಘ ಸಮಯದವರೆಗೆ ದ್ರಾವಿಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆ ಅವರ ಜಾಗಕ್ಕೆ ಸೌರಾಷ್ಟ್ರ ಮಾಜಿ ಕ್ರಿಕೆಟಿಗ ಸಿತಾನ್ಶು ಕೊಟಕ್ರನ್ನು ಇಂಡಿಯಾ ಎ ತಂಡಕ್ಕೆ, ಪರಾಸ್ ಮಹಂಬ್ರೆಯವರನ್ನು ಅಂಡರ್ 19 ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇವರ ಅವಧಿ ಕೆಲವು ತಿಂಗಳುಗಳಿಗೆ ಮಾತ್ರ ಮೀಸಲಾಗಿದೆ.
ಕೊಟಕ್ 130 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 41.76 ಸರಾಸರಿಯಲ್ಲಿ 70 ವಿಕೆಟ್ ಪಡೆದಿದ್ದಾರೆ. ಅವರು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಹೆಂಬ್ರೆ ಕೂಡ ಕೋಚ್ ದ್ರಾವಿಡ್ ಜೊತೆ ಕೆಲಸ ಮಾಡಿದವರಾಗಿದ್ದು, ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಅವರು 91 ಪ್ರಥಮ ದರ್ಜೆ ಪಂದ್ಯಗಳಲ್ಲಿ 284 ವಿಕೆಟ್ ಪಡೆದಿದ್ದರು. ದ್ರಾವಿಡ್ ಗರಡಿಯಲ್ಲಿದ್ದ ಅಭಯ್ ಶರ್ಮಾ ಹಾಗೂ ಋಷಿಕೇಶ್ ಕನಿತ್ಕರ್ ಮಹೆಂಬ್ರೆಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.