ಲಂಡನ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಬಯೋಸೆಕ್ಯೂರ್ ವಾತಾವರಣದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಸರಣಿ ಸೆಪ್ಟೆಂಬರ್ 4ರಿಂದ ಆರಂಭವಾಗಲಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇಂಗ್ಲೆಂಡ್ ಮಾಧ್ಯಮದ ಪ್ರಕಾರ ಪ್ರವಾಸ ಟಿ-20 ಸರಣಿಯಿಂದ ಆರಂಭವಾಗಲಿದೆ. ಸೆಪ್ಟೆಂಬರ್ 4, 6 ಮತ್ತು 8 ರಂದು ಟಿ -20 ಹಾಗೂ ಏಕದಿನ ಸರಣಿ ಸೆಪ್ಟೆಂಬರ್ 10, 12, ಹಾಗೂ 15 ರಂದು ನಡೆಯಲಿದೆ. ಆಸ್ಟ್ರೇಲಿಯಾ ತಂಡ ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಎಲ್ಲ ಆರು ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರವ ಸೌತಾಂಪ್ಟನ್ ಮತ್ತು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ನಲ್ಲೇ ಈ ಆರು ಪಂದ್ಯಗಳು ನಡೆಯಲಿವೆ. ಈ ಎರಡು ಕ್ರೀಡಾಂಗಣಗಳು ಹೋಟೆಲ್ಗಳಿಗೆ ಹೊಂದಿಕೊಂಡಂತೆ ಇದ್ದು, ಎರಡು ತಂಡಗಳ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು ಎಲ್ಲ ರೀತಿಯ ಅನುಕೂಲವಿದೆ. ಪಾಕಿಸ್ತಾನದ ವಿರುದ್ಧದ ಸರಣಿಗಳು ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಈ ಪ್ರವಾಸಕ್ಕಾಗಿ ಈಗಾಗಲೆ ಕ್ರಿಕೆಟ್ ಆಸ್ಟ್ರೇಲಿಯಾ 26 ಆಟಗಾರರ ಪ್ರಾಥಮಿಕ ತಂಡವನ್ನು ಕಳೆದ ವಾರ ಪ್ರಕಟಿಸಿದೆ. ಈ ಪಟ್ಟಿಯಲ್ಲಿರುವ ಆಟಗಾರರಲ್ಲೇ ಪ್ರವಾಸಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಿದೆ.
ಇಂಗ್ಲೆಂಡ್ನಲ್ಲಿ ಆಸ್ಟ್ರೇಲಿಯಾ ಆಟಗಾರರು ಎದರಿಸಬೇಕಾದ ನಿರ್ಬಂಧಗಳ ಆಧಾರದ ಮೇಲೆ ಮತ್ತು ಆಟಗಾರರು ಮನೆಗೆ ಮರಳಿದ ನಂತರ ಪ್ರವಾಸದ ಬಗ್ಗೆ ನಿರ್ಧರಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡದ ಮುಖ್ಯಸ್ಥ ಬೆನ್ ಆಲಿವರ್ ಸ್ಪಷ್ಟಪಡಿಸಿದ್ದಾರೆ.