ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ವಿಶ್ವದೆಲ್ಲೆಡೆ ಕ್ರಿಕೆಟ್ ಸೇರಿದಂತೆ ಎಲ್ಲ ರೀತಿಯ ಕ್ರೀಡೆಗಳು ಸ್ಥಗಿತಗೊಂಡಿವೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಯೋ ಸೆಕ್ಯೂರ್ ತಾಣಗಳಲ್ಲಿ ಕ್ರಿಕೆಟ್ ನಡೆಸಲು ಸಿದ್ದವಾಗಿದೆ.
ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ವಿರುದ್ಧದ ಸರಣಿಯನ್ನು ಬಯೋ ಸೆಕ್ಯೂರ್ ಸ್ಥಳದಲ್ಲಿ ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಿದ್ದವಾಗುತ್ತಿರುವುದು ಅವಾಸ್ತವಿಕ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.
ಇಸಿಬಿ ಬಯೋ ಸೆಕ್ಯೂರ್(ಜೀವಾ ಸುರಕ್ಷತಾ) ತಾಣದಲ್ಲಿ ನಡೆಸಲು ಇಸಿಬಿ ಸಮರ್ಥವಾಗಿದೆ. ಆದರೆ, ಇದು ಅವಾಸ್ತವಿಕವಾಗಿದೆ. ಅವರಿಗೆ ಬೇರೆ ಕ್ರಿಕೆಟ್ ಪಂದ್ಯಗಳಿಲ್ಲದಿರುವುದರಿಂದ ಇದು ಸುಲಭ ಸಾಧ್ಯ ಎಂದು ದ್ರಾವಿಡ್ ಹೇಳಿದ್ದಾರೆ.
ಬಯೋ ಸೆಕ್ಯುರ್ ವಾತಾವರಣದಲ್ಲಿ ಕ್ರಿಕೆಟ್ ನಡೆಸಲು ಇಸಿಬಿಯಿಂದ ಸಾಧ್ಯವಾಗಬಹುದು. ಆದರೆ ಪಂದ್ಯಗಳಿಗೆ ಪಾಲ್ಗೊಳ್ಳಲು ಪ್ರಯಾಣಿಸುವುದು, ಟೂರ್ನಿಯಲ್ಲಿ ಪಾಲ್ಗೊಳ್ಳುವ ಮಂದಿಯನ್ನೆಲ್ಲ ನಿರ್ವಹಣೆ ಮಾಡಿಕೊಂಡು ಸರಣಿ ನಡೆಸಲು ಬೇರೆ ದೇಶಗಳಿಗೆ ಸಾಧ್ಯವಿಲ್ಲ ಎಂದು ದ್ರಾವಿಡ್ ಉಲ್ಲೇಖಿಸಿದ್ದಾರೆ.
ಇಸಿಬಿ ಮಾತ್ರವಲ್ಲ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಬಯೋ ಸೆಕ್ಯೂರ್ ಪ್ರದೇಶದಲ್ಲಿ ಸರಣಿ ಆಯೋಜಿಸಲು ಸಲಹೆ ನೀಡಿತ್ತು. ಆದರೆ, ದ್ರಾವಿಡ್ ಪ್ರಕಾರ ಎಲ್ಲ ದೇಶಗಳಿಗೂ ಬಯೋ ಸೆಕ್ಯೂರ್ ತಾಣಗಳಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ದ್ರಾವಿಡ್ ತಮ್ಮ ವಾದ ಮಂಡಿಸಿದ್ದಾರೆ.
ಮೊದಲು ಪರೀಕ್ಷೆ ನಡೆಸಿ, ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ ನಂತರ ಟೆಸ್ಟ್ ಪಂದ್ಯ ಆಯೋಜಿಸಲಾಗುತ್ತದೆ. ಟೆಸ್ಟ್ನ ಮೊದಲ ದಿನ ಆಟಗಾರ ಆರಾಮಾಗಿ ಆಟ ಆಡುತ್ತಾನೆ. ಆದರೆ ಪಂದ್ಯದ ಎರಡನೇ ದಿನ ಯಾವುದಾದರೂ ಒಬ್ಬ ಆಟಗಾರನಿಗೆ ಪಾಸಿಟಿವ್ ವರದಿ ಬಂದರೆ ಹೇಗೆ ? ನಂತರ ಏನು ಮಾಡುವುದು? ಆಗ ನಿಯಮಗಳು ಎಲ್ಲಿ ನಿಲ್ಲುತ್ತವೆ. ಆ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ಎಲ್ಲರನ್ನು ಕ್ವಾರಂಟೈನ್ಗೆ ತಳ್ಳುತ್ತದೆ ಎಂದು ದ್ರಾವಿಡ್ ವಿವರಿಸಿದ್ದಾರೆ.