ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತು ಮಾತನಾಡಿರುವ ಪಾಕ್ನ ಮಾಜಿ ಟೆಸ್ಟ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಚ್ಚರಿಕೆ ನೀಡಿದೆ.
ಹೈ-ಪರ್ಫಾರ್ಮೆನ್ಸ್ ಸೆಂಟರ್ನಲ್ಲಿ ಮುಖ್ಯಸ್ಥರಾಗಿರುವ ಸಕ್ಲೇನ್ ಅವರು ಕ್ರಿಕೆಟ್ ಬೋರ್ಡ್ ಉದ್ಯೋಗಿಯಾಗಿದ್ದಾರೆ. ಯುಟ್ಯೂಬ್ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಪಿಸಿಬಿ ಹೇಳಿದೆ.
ಧೋನಿಗೆ ಸರಿಯಾದ ವಿದಾಯ ಪಂದ್ಯವನ್ನು ಆಯೋಜಿಸದಿದ್ದಕ್ಕೆ ಬಿಸಿಸಿಐ ಟೀಕಿಸಿರುವುದು ಮತ್ತು ಧೋನಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ಪಿಸಿಬಿ ಅಸಮಾಧಾನ ವ್ಯಕ್ತಪಡಿಸಿದೆ. ಭಾರತೀಯ ಕ್ರಿಕೆಟ್ ವ್ಯವಹಾರಗಳಲ್ಲಿ ಅವರು ಹಸ್ತಕ್ಷೇಪ ಮಾಡಿದ್ದಕ್ಕಾಗಿ ಪಿಸಿಬಿ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಭಾರತೀಯ ಕ್ರಿಕೆಟ್ ಅಥವಾ ಆಟಗಾರರ ಬಗ್ಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸುವಂತೆ ಪಿಸಿಬಿ ರಾಷ್ಟ್ರೀಯ ತಂಡದ ಆಟಗಾರರಿಗೆ ಸಲಹೆ ನೀಡಿತ್ತು. ಸಕ್ಲೇನ್ ಪೋಸ್ಟ್ ಮಾಡಿದ ವಿಡಿಯೋದಿಂದಾಗಿ ಪಿಸಿಬಿ ಅಸಮಾಧಾನಗೊಂಡಿದ್ದು, ಹೈ-ಪರ್ಫಾರ್ಮೆನ್ಸ್ ಸೆಂಟರ್ ಮತ್ತು ಪ್ರಾಂತೀಯ ತಂಡಗಳಲ್ಲಿನ ಇತರ ಎಲ್ಲ ತರಬೇತುದಾರರನ್ನು ಅಂತಹ ಯಾವುದೇ ಕೃತ್ಯದಿಂದ ದೂರ ಇರುವಂತೆ ಹೇಳಿದೆ.
ತರಬೇತುದಾರರಲ್ಲಿ ಅನೇಕರು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದರು. ಆದರೆ, ಈಗ ಅವರು ಮಂಡಳಿಯ ಉದ್ಯೋಗಿಗಳಾಗಿರುವುದರಿಂದ ಯೂಟ್ಯೂಬ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಎರಡನೇಯದಾಗಿ ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ನೀಡುವಾಗಲೂ ಅವರು ಮೊದಲು ಅನುಮತಿ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಬೋರ್ಡ್ ಮೂಲಗಳು ಹೇಳಿವೆ.
ಅವರಲ್ಲಿ ಯಾರಾದರೂ ಪಿಸಿಬಿಯ ಸೇವಾ ನಿಯಮಗಳನ್ನು ಉಲ್ಲಂಘಿಸಿದರೆ, ಅವರು ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸಕ್ಲೇನ್ ಸೇರಿದಂತೆ ಎಲ್ಲ ತರಬೇತುದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.