ಬೆಂಗಳೂರು: ಭಾರತ ಕಂಡಂತಹ ಲೆಜೆಂಡರಿ ವಿಕೆಟ್ ಕೀಪರ್ ಎಂಎಸ್ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿದ್ದ ರಿಷಭ್ ಪಂತ್ ಆರಂಭದಲ್ಲಿ ಅಬ್ಬರಿಸಿ ಇದೀಗ ಕಳಪೆ ಬ್ಯಾಟಿಂಗ್ನಿಂದ ಟೀಕೆ ಎದುರಿಸುತ್ತಿದ್ದಾರೆ. ಆದರೆ, ಆಯ್ಕೆ ಸಮಿತಿ ಅಧ್ಯಕ್ಷ ಪಂತ್ ವೈಫಲ್ಯದ ಬಗ್ಗೆ ಮೌನ ಮುರಿದಿದ್ದು, ಪಂತ್ ವಿಚಾರದಲ್ಲಿ ತಾಳ್ಮೆ ಅಗತ್ಯ ಎಂದಿದ್ದಾರೆ.
ಟೀಂ ಇಂಡಿಯಾ ಪರ ವಿಶ್ವಕಪ್ ನಂತರ ಕಾಯಂ ವಿಕೆಟ್ ಕೀಪರ್ ಆಗಿ ಬಡ್ತಿ ಪಡೆದಿರುವ ರಿಷಭ್ ಪಂತ್ ಕಳೆದ ಕೆಲವು ಇನ್ನಿಂಗ್ಸ್ಗಳಲ್ಲಿ 10ರ ಗಡಿ ದಾಟಲು ವಿಫಲರಾಗುತ್ತಿದ್ದಾರೆ. ರನ್ಗಳಿಸಿರುವುದಕ್ಕಿಂತಲೂ ಹೆಚ್ಚಾಗಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟ್ ಆಗುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ರಿಷಭ್ ಪಂತ್ ಅವರನ್ನು ತಂಡದಿಂದ ಕೈ ಬಿಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಪಂತ್ ಆಯ್ಕೆಯ ಬಗ್ಗೆ ಮಾತನಾಡಿರುವ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್, ಪಂತ್ ಪ್ರತಿಭಾವಂತ ಬ್ಯಾಟ್ಸ್ಮನ್, ಆದರೆ, ಅವರ ಇತ್ತೀಚಿನ ಪ್ರದರ್ಶನ ಕಳಪೆಯಾಗಿದೆ. ಅವರಿಗೆ ಇನ್ನಷ್ಟು ಅವಕಾಶಗಳನ್ನು ನೀಡಿದರೆ ಅವರು ಖಂಡಿತ ಉತ್ತಮ ಪ್ರದರ್ಶನ ನೀಡಲಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ನಾನು ಮೊದಲೇ ಹೇಳಿದ್ದೇನೆ. ಪಂತ್ ಯುವ ಆಟಗಾರ, ಅವರಿಂದ ಈಗಲೇ ಅತ್ಯುತ್ತಮ ಪ್ರದರ್ಶನ ಬಯಸಲು ಸಾಧ್ಯವಿಲ್ಲ. ಅವರ ಸಾಮರ್ಥ್ಯ ತೋರ್ಪಡಿಸಲು ಸಾಕಷ್ಟು ಅವಕಾಶ ನೀಡಬೇಕಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು ಎಂದಿದ್ದಾರೆ.
ರಿಷಭ್ ಪಂತ್ ಜೊತೆಗೆ ಮೂರು ಮಾದರಿಯ ಕ್ರಿಕೆಟ್ಗೆ ಹೊಂದಿಕೊಳ್ಳುವಂತಹ ಮೂರು ಯುವ ವಿಕೆಟ್ ಕೀಪರ್ಗಳು ನಮ್ಮ ತೆಕ್ಕೆಯಲ್ಲಿದ್ದಾರೆ. ಅವರನ್ನು ಪಂತ್ಗೆ ಬ್ಯಾಕಪ್ ವಿಕೆಟ್ ಕೀಪರ್ಗಳಾಗಿ ತಯಾರು ಮಾಡುವ ಕೆಲಸ ನಡೆಯುತ್ತಿದೆ. ಭಾರತ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆಎಸ್ ಭರತ್ ಟೆಸ್ಟ್ಗೆ ಹೊಂದಿಕೊಳ್ಳುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಇನ್ನು ಸೀಮಿತ ಓವರ್ ಕ್ರಿಕೆಟ್ನಲ್ಲಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್ ಹಾಗೂ ಬ್ಯಾಟಿಂಗ್ ಕೂಡ ನಡೆಸಬಲ್ಲರು. ಇವರು ಮುಂದೊಂದು ದಿನ ಭಾರತ ತಂಡದ ಭಾಗವಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.