ಅಹಮದಾಬಾದ್: ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿ ಸತತ 2ನೇ ಬಾರಿ ಸಯ್ಯದ್ ಮುಷ್ತಾಕ್ ಅಲಿ ಫೈನಲ್ ಪ್ರವೇಶಿಸಿರುವ ತಮಿಳುನಾಡು ಭಾನುವಾರ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿಯೂ ಉತ್ಸಾಹದ ಪ್ರದರ್ಶನ ತೋರುತ್ತಿರುವ ಬರೋಡ ಸವಾಲನ್ನು ಎದುರಿಸಲಿದೆ.
ತಮಿಳುನಾಡು ತಂಡ ಅನುಭವಿ ಮತ್ತು ಯುವ ಬಳಗದ ಸಮ್ಮಿಶ್ರ ತಂಡವಾಗಿದ್ದು, ದಿನೇಶ್ ಕಾರ್ತಿಕ್ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಒಂದೂ ಪಂದ್ಯವನ್ನು ಕಳೆದುಕೊಳ್ಳದ ತಂಡ ಚೇಸಿಂಗ್ನಲ್ಲಿ ಪ್ರಾಬಲ್ಯ ಮೆರೆದಿದೆ.
ಬರೋಡ ತಂಡ ಟೂರ್ನಿಗೂ ಮೊದಲೇ ಉಪನಾಯಕ ದೀಪಕ್ ಹೂಡಾರನ್ನು, ಟೂರ್ನಿ ಆರಂಭವಾದ ನಂತರ ನಾಯಕ ಕೃನಾಲ್ ಪಾಂಡ್ಯರನ್ನು ಕಳೆದುಕೊಂಡಿತು. ಆದರೂ ಕೆಲವು ಏಕಪಕ್ಷೀಯ ಗೆಲುವು ಪಡೆದಿದೆ. ಅದರಲ್ಲೂ ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ನಲ್ಲಿ ಪಂಜಾಬ್ ಮತ್ತು ಹರಿಯಾಣ ತಂಡಗಳನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ.
ಅತ್ಯುತ್ತಮ ಪ್ರದರ್ಶನ ತೋರಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್(350) ಆಗಿರುವ ಎನ್.ಜಗದೀಶನ್ ಜೊತೆಗೆ ಅನುಭವಿಗಳಾದ ಅರುಣ್ ಕಾರ್ತಿಕ್, ದಿನೇಶ್ ಕಾರ್ತಿಕ್, ಬಾಬಾ ಅಪರಾಜಿತ್ ಹಾಗೂ ಹರಿ ನಿಶಾಂತ್ರಂತಹ ಆಟಗಾರರ ಬಲವನ್ನು ತಮಿಳುನಾಡು ತಂಡ ಹೊಂದಿದೆ.
ಆದರೆ ಬರೋಡದಲ್ಲಿ ಕೇದಾರ್ ದೇವಧರ್(333) 2ನೇ ಗರಿಷ್ಠ ಸ್ಕೋರರ್ ಆಗಿದ್ದು, ಬ್ಯಾಟಿಂಗ್ ವಿಭಾಗದ ಆಧಾರ ಸ್ಥಂಭವಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ವಿಷ್ಣು ಸೋಲಂಕಿ ಮಾತ್ರ ಬ್ಯಾಟಿಂಗ್ನಲ್ಲಿ ನಂಬಬಹುದಾದ ಆಟಗಾರರಾಗಿದ್ದಾರೆ. ಆದರೆ ಟೂರ್ನಿಯಲ್ಲಿ ಈ ತಂಡ ಉತ್ಸಾಹದಿಂದ ಆಡುತ್ತಿದ್ದು, ನಾಳಿನ ಪಂದ್ಯದಲ್ಲೂ ತಮ್ಮ ಪ್ರದರ್ಶನವನ್ನು ತೋರಿಸುವ ವಿಶ್ವಾಸದಲ್ಲಿದೆ.
ಟೂರ್ನಿಯ ಇತಿಹಾಸದಲ್ಲಿ ಬರೋಡ 2 ಬಾರಿ ಚಾಂಪಿಯನ್ ಮತ್ತು ಒಮ್ಮೆ ರನ್ನರ್ ಅಪ್ ಆಗಿದೆ. ತಮಿಳುನಾಡು ತಂಡ ಚೊಚ್ಚಲ ಟೂರ್ನಿ ಗೆದ್ದಿದ್ದು ಬಿಟ್ಟರೆ 2020ರಲ್ಲಿ ಮಾತ್ರ ಫೈನಲ್ ಪ್ರವೇಶ ಪಡೆದು ಕರ್ನಾಟಕ ವಿರುದ್ಧ ಸೋಲು ಕಂಡಿತ್ತು. ಇದೀಗೆ ತನ್ನ 2ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಒಂದು ಬರೋಡ ಗೆದ್ದರೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯನ್ನು 3 ಬಾರಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಭಾನುವಾರ ಸಂಜೆ 7 ಗಂಟೆಗೆ ಅಹಮದಾಬಾದ್ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.