ಮುಂಬೈ: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಗ್ರೇಟ್ ಫಿನಿಶರ್ ಮಾತ್ರವಲ್ಲ, ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೆ ಅತ್ಯುತ್ತಮ ಸ್ಫೋಟಕ ಬ್ಯಾಟ್ಸ್ಮನ್ ಆಗಿರುತ್ತಿದ್ದರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಧೋನಿ ಮಂಗಳವಾರ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಧೋನಿ, ನಂತರ ಭಾರತ ತಂಡದ ಕಪ್ತಾನನಾಗಿ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಆ ಸಾಧನೆ ಮಾಡಿದ ವಿಶ್ವದ ಏಕೈಕ ನಾಯಕ ಕೂಡ ಆಗಿದ್ದಾರೆ.

ಬಿಸಿಸಿಐ ಶೇರ್ ಮಾಡಿರುವ ಮಯಾಂಕ್ ಜೊತೆ ಸೌರವ್ ಗಂಗೂಲಿ ಸಂವಾದ ಕಾರ್ಯಕ್ರಮದಲ್ಲಿ, ನೀವು ಮಹಿ ಭಾಯ್ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ರಿ. ನಂತರ ನಡೆದದ್ದು ಇತಿಹಾಸ. ಇದು ಕಥೆಯೇ ಅಥವಾ ನಿಜವೇ? ನಿಮ್ಮ ಪದಗಳಲ್ಲಿ ಹೇಳಿ ಎಂದು ಮಯಾಂಕ್ ಗಂಗೂಲಿಯನ್ನು ಕೇಳಿದರು.
ಹೌದು, ಅದು ನಿಜ, ಆದರೆ ಅದು ನನ್ನ ಕರ್ತವ್ಯವಾಗಿತ್ತು. ಅದು ಎಲ್ಲಾ ನಾಯಕನ ಕರ್ತವ್ಯ. ಉತ್ತಮವಾದದನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ಆದಷ್ಟು ಒಳ್ಳೆಯದನ್ನು ಮಾಡಬೇಕು ಎಂದು ಗಂಗೂಲಿ ಹೇಳಿದ್ದಾರೆ.

"ನೀವು ಒಬ್ಬ ಆಟಗಾರನ ಮೇಲೆ ನಂಬಿಕೆಯಿಟ್ಟು ಹೊರಟರೆ, ಆತ ನಿಮಗಾಗಿ ಒಳ್ಳೆಯದನ್ನೇ ಹಿಂತಿರುಗಿಸುತ್ತಾನೆ. ಭಾರತೀಯ ಕ್ರಿಕೆಟ್ ಮಹೇಂದ್ರ ಸಿಂಗ್ ಧೋನಿಯಂತಹ ಆಟಗಾರನನ್ನು ಪಡೆದಿರುವುದಕ್ಕೆ ನಾನು ಖುಷಿಪಡುತ್ತೇನೆ. ಏಕೆಂದರೆ ಅವರು ನಂಬಲಸಾಧ್ಯವಾದಂತಹವರು"
"ಆತ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬ. ಕೇವಲ ಫಿನಿಶರ್ ಆಗಿ ಮಾತ್ರವಲ್ಲ, ಎಲ್ಲರೂ ಆತನನ್ನು ಕೆಳ ಕ್ರಮಾಂಕದಲ್ಲಿ ಅದ್ಭುತ ಫಿನಿಶರ್ ಎಂದೇ ಮಾತನಾಡುತ್ತಾರೆ. ಆದರೆ ಅವರು ನಾನು ನಾಯಕನಾಗಿದ್ದಾಗ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವೈಜಾಗ್ನಲ್ಲಿ ಪಾಕಿಸ್ತಾನದ ವಿರುದ್ಧ 140 ರನ್ ಗಳಿಸಿದ್ದರು. ನಾನು ಅವರನ್ನು ಟಾಪ್ ಆರ್ಡರ್ ಬ್ಯಾಟ್ಸ್ಮನ್ ಎಂದು ನಂಬಿದ್ದೆ. ಏಕೆಂದರೆ ಅವರು ತುಂಬಾ ಅಪಾಯಕಾರಿ ಬ್ಯಾಟ್ಸ್ಮನ್ ಆಗಿದ್ದರು" ಎಂದು ದಾದಾ ಆಭಿಪ್ರಾಯಪಟ್ಟಿದ್ದಾರೆ.

ಸೀಮಿತ ಓವರ್ಗಳ ಪಂದ್ಯದಲ್ಲಿ ಒಬ್ಬ ಉತ್ತಮ ಬ್ಯಾಟ್ಸ್ಮನ್ ಬೌಂಡರಿಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿರುತ್ತಾನೆ. ನೀವು ಏಕದಿನ ಕ್ರಿಕೆಟ್ ಇತಿಹಾಸದ ಕಡೆ ನೋವುದಾದರೆ ತಂಡ ಸಂಕಷ್ಟದಲ್ಲಿರುವಾಗ ಒಬ್ಬ ಅತ್ಯುತ್ತಮ ಆಟಗಾರ ಸ್ಥಿರತೆಯನ್ನು ಕಂಡುಕೊಳ್ಳುತ್ತಾನೆ. ಅಂತಹವರಲ್ಲಿ ಧೋನಿ ಕೂಡ ಒಬ್ಬರು ಎಂದು ಗಂಗೂಲಿ ಹೇಳಿದ್ದಾರೆ.