ಲಂಡನ್: ಖಾಯಂ ಟೆಸ್ಟ್ ನಾಯಕ ಜೋ ರೂಟ್ ಅನುಪಸ್ಥಿತಿಯಲ್ಲಿ ಇಂಗ್ಲಿಷ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ನಾಯಕನಾಗಿ ಅದ್ಭುತವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಹೇಳಿದ್ದಾರೆ.
ಜೋ ರೂಟ್ ಅವರ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡುತ್ತಿರುವುದರಿಂದ ಏಜಸ್ ಬೌಲ್ನಲ್ಲಿ ನಡೆಯಲಿರುವ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಹು ನಿರೀಕ್ಷಿತ ಟೆಸ್ಟ್ ಸರಣಿ ಜುಲೈ 8 ರಿಂದ ಆರಂಭಗೊಳ್ಳಲಿದೆ.
ಬೆನ್ ಸ್ಟೋಕ್ಸ್ ಅತ್ಯುತ್ತಮ ಕ್ರಿಕೆಟ್ ಜ್ಞಾನವನ್ನು ಹೊಂದಿದ್ದಾರೆ. ನಾಯಕತ್ವದಲ್ಲಿ ಅನುಭವದ ಕೊರೆತೆ ಇದ್ದರೂ, ತಂಡ ಅತ್ಯುತ್ತಮ ಹಂತದಲ್ಲಿ ಆಡಿರುವ ಸಂದರ್ಭದಲ್ಲಿ ಹಿರಿಯ ಆಟಗಾರರ ಜೊತೆ ಆಡಿದ ಅನುಭವವಿದೆ ಎಂದು ವೇಗಿ ಮಾರ್ಕ್ವುಡ್ ಅಭಿಪ್ರಾಯಪಟ್ಟಿದ್ದಾರೆ.
"ಡರ್ಹಾಮ್ ಅಕಾಡೆಮಿಯ ದಿನಗಳಲ್ಲಿ, ಸ್ಟೋಕ್ಸ್ ನಾಯಕತ್ವದಡಿ ಆಡಿದ ಕೆಲವೇ ಜನರಲ್ಲಿ ನಾನೂ ಒಬ್ಬ" ಎಂದು ವುಡ್ ಬ್ರಿಟಿಷ್ ಔಟ್ಲೆಟ್ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

"ಅವರು ಆಗ ಉತ್ತಮ ನಾಯಕನಾಗಿದ್ದರು. ಅವರು ಈಗಿನಂತೆಯೇ ತಂಡವನ್ನು ಮುಂದೆ ನಿಂತು ನಡೆಸುತ್ತಿದ್ದರು. ವರ್ಷಗಳು ಉರುಳಿದಂತೆ, ಸ್ಟೋಕ್ಸ್ ಹಿರಿಯ ಆಟಗಾರನಾಗಿ ಪ್ರಬುದ್ಧರಾಗಿದ್ದಾರೆ, ಮಾದರಿ ಆಟಗಾರನಾಗಿ ಬದಲಾಗಿದ್ದಾರೆ. ಮತ್ತು ಜನರನ್ನು ಅವರೊಂದಿಗೆ ಕರೆದುಕೊಂಡು ಹೋಗುತ್ತಾರೆ"
ಅವರು ಉತ್ತಮ ಕ್ರಿಕೆಟ್ ಮೆದುಳು ಹೊಂದಿದ್ದಾರೆ. ಅವರಿಗೆ ನಾಯಕತ್ವದಲ್ಲಿ ಸಾಕಷ್ಟು ಅನುಭವವಿಲ್ಲ. ಅವರೊಬ್ಬ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ಅವರಂತಹ ಅಪರೂಪದ ಆಟಗಾರನಾಗಿದ್ದು, ಹೊಸ ಆಲೋಚನೆಗಳನ್ನು ಹೊರ ಹಾಕುತ್ತಾರೆ" ಎಂದು ವುಡ್ ಹೇಳಿಕೊಂಡಿದ್ದಾರೆ.
ಸೀಮಿತ ಓವರ್ಗಳ ಉಪನಾಯಕರಾಗಿರುವ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಸ್ಟೋಕ್ಸ್‌ಗೆ ಉಪನಾಯಕನಾಗಲಿದ್ದಾರೆ ಎಂದು ಇಸಿಬಿ ಮಂಗಳವಾರ ಪ್ರಕಟಿಸಿದೆ.